ಜಿಲ್ಲೆ

ಬಿಜೆಪಿಗೆ ಮಾಜಿ ಸಚಿವ ಸೊಗಡು ಶಿವಣ್ಣ ಗುಡ್‌ಬೈ!

ವಿಜಯವಾಣಿ ಸುದ್ದಿಜಾಲ ತುಮಕೂರು
ಮಾಜಿ ಸಚಿವ ಸೊಗಡುಶಿವಣ್ಣ ಪಕ್ಷಕ್ಕೆ ಗುಡ್‌ಬೈ ಹೇಳಲು ನಿರ್ಧರಿಸಿದ್ದಾರೆ. ಐದು ದಶಕಗಳ ಸುದೀರ್ಘ ಕಾಲದ ಪಕ್ಷದ ಜತೆಗಿನ ರಾಜಕೀಯ ನಂಟನ್ನು ಕಡಿದುಕೊಂಡು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸುವ ಮೂಲಕ ಬಂಡಾಯದ ಬಾವುಟ ಹಾರಿಸಿದ್ದಾರೆ.
ಮುಂದಿನ ರಾಜಕೀಯ ನಡೆ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಬುಧವಾರ ನಗರದ ಮಾಕಂ ಕಲ್ಯಾಣ ಮಂಟಪದಲ್ಲಿ ಕರೆದಿದ್ದ ಬೆಂಬಲಿಗರ, ಹಿತೈಷಿಗಳ ಸಭೆಯಲ್ಲಿ ವರಿಷ್ಠರ ವಿರುದ್ಧ ಆಕ್ರೋಶ ಹೊರಹಾಕಿದರು. ಹಗಲುರಾತ್ರಿ ಪಕ್ಷ ಕಟ್ಟಿ ಬೆಳೆಸಿದ್ದು, ಎಲ್ಲಿಯೋ ಇದ್ದವರನ್ನು ಕರೆ ತಂದು ನಮ್ಮನ್ನು ಮೂಲೆಗುಂಪು ಮಾಡಲು ಹೊರಟಿರುವುದನ್ನು ಎಷ್ಟು ದಿನ ಸಹಿಸಲು ಸಾಧ್ಯ ಎಂದು ಗುಡುಗಿದರು. ಕಾರ್ಯಕರ್ತರನ್ನು ಜೈಲಿಗೆ ಕಳುಹಿಸಿದವರನ್ನು ತಲೆ ಮೇಲೆ ಕೂರಿಸಿಕೊಂಡಿದ್ದೇವೆ. ಇಷ್ಟು ದಿನ ಪಕ್ಷಕ್ಕೆ ಗೌರವ ಕೊಟ್ಟು ಎಲ್ಲವನ್ನೂ ಸಹಿಸಿಕೊಂಡಿದ್ದೆ, ಮುಂದಿನದನ್ನು ಜನರಿಗೆ ಬಿಡುತ್ತೇನೆ. ರಾಜೀನಾಮೆ ಕೊಡೋದು ನೂರಕ್ಕೆ ನೂರು ಸತ್ಯ. ಪಕ್ಷ ನನ್ನ ಕೈ ಹಿಡಿಯುತ್ತೆ ಎಂದು ಭಾವಿಸಿದ್ದೆ. ನನ್ನ ಕ್ಷೇತ್ರದ ಮತದಾರ ದೇವರ ಸತ್ಯ ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ. ಪಕ್ಷದ ಎಲ್ಲ ಬಾವುಟ, ಕರಪತ್ರ ನನ್ನ ಮನೆಯಲ್ಲಿವೆ. ಅದಕ್ಕೆ ಗೌರವ ಕೊಡಬೇಕು. ಅವುಗಳನ್ನು ಬೇರೆಡೆಗೆ ಸ್ಥಳಾಂತರಿಸಿದ ಬಳಿಕ ರಾಜೀನಾಮೆ ಘೋಷಿಸುತ್ತೇನೆ. ನಂತರ ನಿಮ್ಮೆಲ್ಲರ ಆಶಯದಂತೆ ಪಕ್ಷೇತರನಾಗಿ ಸ್ಪರ್ಧಿಸುತ್ತೇನೆ ಎಂದು ಭಾವುಕರಾದರು. ಈ ವೇಳೆ ಬೆಂಬಲಿಗರು ‘ನಿಮ್ಮ ಜತೆಗಿದ್ದೀವಿ. ಬಿಜೆಪಿ ತೊರೆದುಬನ್ನಿ. ಪಕ್ಷೇತರರಾಗಿ ನಿಲ್ಲಿಸಿ ಗೆಲ್ಲಿಸುತ್ತೇವೆ’ ಎಂದರು.
ಸೊಗಡು ಜತೆ ಧನಿಯಾಕುಮಾರ್: ಟಿಕೆಟ್ ಅಧಿಕೃತ ಘೋಷಣೆ ಹಿನ್ನೆಲೆಯಲ್ಲಿ ಶಾಸಕ ಜಿ.ಬಿ.ಜ್ಯೋತಿಗಣೇಶ್ ಬುಧವಾರ ಪಕ್ಷದ ಪದಾಧಿಕಾರಿಗಳು, ಕಾರ್ಯಕರ್ತರೊಂದಿಗೆ ಸಿದ್ಧಗಂಗಾ ಮಠಕ್ಕೆ ತೆರಳಿ ಶಿವಕುಮಾರ ಶ್ರೀಗಳ ಗದ್ದುಗೆಗೆ ಪೂಜೆ ಸಲ್ಲಿಸಿದರಲ್ಲದೆ, ಮಠಾಧ್ಯಕ್ಷ ಸಿದ್ದಲಿಂಗ ಶ್ರೀಗಳ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಪಕ್ಷದ ಎಲ್ಲ ಕಾರ್ಪೋರೇಟರ್‌ಗಳು ಇದ್ದರು. 15ನೇ ವಾರ್ಡ್ ಪಾಲಿಕೆ ಸದಸ್ಯೆ ವಿ.ಎಸ್.ಗಿರಿಜಾ ಕೂಡ ಇದ್ದರು. ಗಿರಿಜಾ ಪತಿ ಧನಿಯಾಕುಮಾರ್ ಪಕ್ಷದ ವಿರುದ್ಧ ಸಿಡಿದೆದ್ದಿರುವ ಸೊಗಡುಶಿವಣ್ಣ ಬೆಂಬಲಿಗರ ಸಭೆಯಲ್ಲಿ ಕಾಣಿಸಿಕೊಂಡರು. ಬಿಜೆಪಿ ಜಿಲ್ಲಾ ವಕ್ತಾರ ಕೆ.ಪಿ.ಮಹೇಶ್, ಬನಶಂಕರಿ ಬಾಬು, ರಂಗಾನಾಯಕ್, ಟೂಡಾ ಮಾಜಿ ಅಧ್ಯಕ್ಷ ಶ್ರೀಧರಮೂರ್ತಿ, ರಾಜ್ಯ ಒಕ್ಕಲಿಗರ ಸಂಘದ ಮಾಜಿ ನಿರ್ದೇಶಕ ನರೇಂದ್ರಬಾಬು, ಆಶಾಪ್ರಸನ್ನಕುಮಾರ್, ಶಬ್ಬೀರ್ ಅಹ್ಮದ್, ಜಯಸಿಂಹ, ರಮೇಶಾಚಾರ್, ಡೆಲ್ಟಾರವಿ ಸೇರಿದಂತೆ ಹಲವರು ಸಭೆಯಲ್ಲಿದ್ದರು.
ನಂಗೆ ತೊಡೆತಟ್ಟುವುದು ಗೊತ್ತಿದೆ: ಕಾಂಗ್ರೆಸ್ ಕಟ್ಟಿದವರು ಬಿಜೆಪಿಗೆ ಬಂದು ಅಧಿಕಾರ ಅನುಭವಿಸುತ್ತಿದ್ದಾರೆ. ನಾನು ರೈತನ ಮಗ, ಅವರೆಕಾಯಿ ಮಾರಿ ಪಕ್ಷ ಕಟ್ಟಿದವನು, ನನ್ನ ಜನ ಬಿಟ್ಟರೆ ಬೇರೆ ಯಾರೂ ಇಲ್ಲ. ನನ್ನ ಕಾರ್ಯಕರ್ತರ ಒತ್ತಾಸೆಯಂತೆ ಚುನಾವಣೆಗೆ ನಿಲ್ಲುವುದು ಸತ್ಯ. ನಾನು ಒಬ್ಬ ರಾಷ್ಟ್ರಮಟ್ಟದ ಕಬಡ್ಡಿ ಆಟಗಾರ. ಎಲ್ಲವನ್ನು ಕ್ರೀಡಾ ಸ್ಫೂರ್ತಿಯಿಂದ ತೆಗೆದುಕೊಳ್ಳುತ್ತೇನೆ. ಹಾಗೆಯೇ ರಾಜಕೀಯದಲ್ಲೂ ತೊಡೆ ತಟ್ಟಿ ಆಟ ಆಡುವುದು ಗೊತ್ತಿದೆ ಎಂದು ಸೊಗಡು ಶಿವಣ್ಣ ತಮ್ಮ ಬದ್ಧ ರಾಜಕೀಯ ವಿರೋಧಿಗಳಿಗೆ ಎಚ್ಚರಿಕೆ ಸಂದೇಶ ರವಾನಿಸಿದರು.

ರಾಜೀನಾಮೆ ಪತ್ರಗಳಿಗೆ ಸಹಿ ಹಾಕಿ ಇಟ್ಟುಕೊಂಡಿದ್ದೀರಿ, ಅದನ್ನೆಲ್ಲ ಜಿಲ್ಲಾ ಬಿಜೆಪಿ ಕಚೇರಿಗೆ ಕೊಟ್ಟು ಬನ್ನಿ. ಅದನ್ನೆಲ್ಲ ಅವರ ಮುಖದ ಮೇಲೆ ಬಿಸಾಡಿ ಬನ್ನಿ. ನಾನು ಅಲ್ಲಿ ಬರಲ್ಲ. ಯಾಕಂದ್ರೆ ನಾನು ಇನ್ಮೇಲೆ ಅಲ್ಲಿ ಕಾಲೂ ಇಡುವುದಿಲ್ಲ.
ಸೊಗಡುಶಿವಣ್ಣ, ಮಾಜಿ ಸಚಿವ