ವಿಜಯವಾಣಿ ಸುದ್ದಿಜಾಲ ಧಾರವಾಡ
ಚುನಾವಣೆಯಲ್ಲಿ ಹಣದ ಪ್ರಭಾವ, ಐಟಿ, ಇಡಿ ಇಲಾಖೆಗಳನ್ನು ದುರುಪಯೋಗ ಮಾಡಿಕೊಂಡು ಅಧಿಕಾರಕ್ಕೆ ಬರುವುದು ಬೇರೆ. ನಮ್ಮ ಯೋಜನೆಗಳನ್ನು ಹೇಳಿ ಅಧಿಕಾರ ಪಡೆಯುವುದು ಬೇರೆ. ಸೆಂಟ್ರಲ್ ಹಾಗೂ ಪಶ್ಚಿಮ ಕ್ಷೇತ್ರದಲ್ಲಿ ಬಿಜೆಪಿ ಎಲ್ಲ ರೀತಿ ಪ್ರಯೋಗ ಮಾಡಿ ನಮ್ಮನ್ನು ಸೋಲಿಸಿದ್ದಾರೆ. ಆದರೆ ಮತದಾರರು ತಕ್ಕ ಸಂದೇಶ ನೀಡಿ ಕಾಂಗ್ರೆಸ್‌ಗೆ ಸ್ಥಿರ ಸರ್ಕಾರ ನೀಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಜಗದೀಶ ಶೆಟ್ಟರ್ ಹೇಳಿದರು.
ನಗರದ ಮಾಡರ್ನ್ ಹಾಲ್‌ನಲ್ಲಿ ಭಾನುವಾರ ಏರ್ಪಡಿಸಿದ್ದ ಹು-ಧಾ 74 ಪಶ್ಚಿಮ ಮತಕ್ಷೇತ್ರದ ಮತದಾರರು, ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೆಲ ಕಡೆಗಳಲ್ಲಿ ಆಪರೇಷನ್ ಕಮಲ ಮಾಡಿ ಬಿಜೆಪಿ ಅಧಿಕಾರ ಅನುಭವಿಸುತ್ತಿದೆ. ಮತದಾರರು ಒಡೆದಾಳುವ ನೀತಿ ನೋಡುತ್ತಿರುತ್ತಾರೆ ಎಂಬ ಅಂಶವನ್ನು ಬಿಜೆಪಿ ನಾಯಕರು ಅರಿಯಬೇಕು. ಕರ್ನಾಟಕದಲ್ಲಿ ಸರ್ಕಾರ ರಚೆನೆಯಾಗಿ, ಅಧಿವೇಶನ ನಡೆದರೂ ಪ್ರತಿಪಕ್ಷದ ನಾಕಯನನ್ನೇ ಆಯ್ಕೆ ಮಾಡಿಲ್ಲ ಎಂದು ಲೇವಡಿ ಮಾಡಿದರು.
ನಾವು ಲೋಕಸಭೆ ಚುನಾವಣೆಯಲ್ಲಿ ಗೆಲ್ಲಬೇಕು. ವಿಧಾನಸಭೆ ಚುನಾವಣೆಯಲ್ಲಿ ಎಲ್ಲಿ ತಪ್ಪಿದ್ದೇವೆ ಎಂಬುದನ್ನು ಅರಿತು ಅದನ್ನು ಸರಿಪಡಿಸಿಕೊಂಡು ಮುಂದಿನ ಚುನಾವಣೆಗಳನ್ನು ಎದುರಿಸಬೇಕು. ಪ್ರಜಾತಂತ್ರದ ಬಗ್ಗೆ ಭಾಷಣ ಮಾಡುವ ಬಿಜೆಪಿಗರು ತುರ್ತು ಪರಿಸ್ಥಿತಿ ಹೇರುತ್ತಿದ್ದಾರೆ. ಯಾವುದೇ ಧಮ್ಕಿ, ಗಿಮ್ಕಿಗೆ ಹೆದರುವ ಅಗತ್ಯವಿಲ್ಲ. ಐಟಿ, ಇಡಿ ಬಹಳ ದಿನ ನಡೆಯುವುದಿಲ್ಲ ಎಂದರು.
ಪರಾಜಿತ ಅಭ್ಯರ್ಥಿ ದೀಪಕ ಚಿಂಚೋರೆ ಮಾತನಾಡಿ, ಸಭೆ ಬಂದವರು ಪ್ರಾಮಾಣಿಕವಾಗಿ ದುಡಿದವರು. ಬೆಲ್ಲದ ಹಣ ಹಂಚಿ ಚುನಾವಣೆ ಗೆದ್ದಿದ್ದಾರೆ. ಆಡಳಿತ ಮಾಡಲು ಬೆಲ್ಲದ ಅನ್‌ಫಿಟ್ ಆಗಿದ್ದಾರೆ. ನನಗೆ ಟಿಕೆಟ್ ಸಿಗಲು ಇಸ್ಮಾಯಿಲ್ ತಮಟಗಾರ ಒಬ್ಬರು ಕಾರಣ. ಸೋಲಿಗೆ ಯಾರನ್ನೂ ದೂಷಿಸುವುದಿಲ್ಲ. ನಮ್ಮ ಆಡಳಿತದಲ್ಲಿ ಆದ ಕೆಲ ತಪ್ಪುಗಳಿಂದ ಸೋತಿದ್ದೇನೆ. ಪ್ರಾಮಾಣಿಕ ಕಾರ್ಯಕರ್ತರು ನಮ್ಮಲ್ಲಿ ಬಹಳಷ್ಟಿದ್ದಾರೆ. ಅವರನ್ನು ಬೆಂಬಲಿಸಬೇಕು. ನಾನು ನನ್ನ ಸಂಘಟನೆ ಬಿಡುವುದಿಲ್ಲ. ಚುನಾವಣೆ ಪೂರ್ವದಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸುತ್ತೇನೆ. ಹಣ ಬಲದಿಂದ, ಸರ್ಕಾರದ ಆಡಳಿತದ ದುರುಪಯೋಗದಿಂದ ಸೋಲು ಕಂಡಿದ್ದೇನೆ ಎಂದರು.
ನಾಗರಾಜ ಗುರಿಕಾರ, ಸ್ವಾತಿ ಮಾಳಗಿ ಮಾತನಾಡಿದರು. ಮುಖಂಡರಾದ ಶರಣಪ್ಪ ಕೊಟಗಿ, ವಸಂತ ಅರ್ಕಾಚಾರ, ಹೇಮಂತ ಗುರ್ಲಹೊಸೂರ, ಮಲ್ಲಿಕಾರ್ಜುನ ಸಾವುಕಾರ, ಆನಂದ ಜಾಧವ, ಇತರರು ಇದ್ದರು.