ಕೊಪ್ಪಳ: ದೇಶದ ಗಡಿಭಾಗಗಳನ್ನ ಚೀನಾ ತನ್ನದೆಂದು ಹೇಳಿ ನಕಾಶೆ ಬಿಡುಗಡೆ ಮಾಡಿದೆ. ಹೀಗಿದ್ದರೂ ಕೇಂದ್ರ ಸರ್ಕಾರ ಮೌನವಹಿಸಿದೆ. ಬಿಜೆಪಿಗರು ಬಾಯಿ ಮಾತಿನ ನಕಲಿ ದೇಶಭಕ್ತರು. ಇದೊಂದು ನಾಟಕ ಕಂಪನಿ. 2024ರ ಲೋಕಸಭೆ ಚುನಾವಣೆ ಬಳಿಕ ಮನೆಗೆ ಹೋಗಲಿದೆ ಎಂದು ಸಚಿವ ಶಿವರಾಜ ತಂಗಡಗಿ ವ್ಯಂಗ್ಯವಾಡಿದರು.
ನಗರದಲ್ಲಿ ಬುಧವಾರ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದರು.
ಚೀನಾ ನೂತನ ನಕಾಶೆ ಬಿಡಿಗಡೆ ಮಾಡಿದ್ದು, ಅದರಲ್ಲಿ ಅರುಣಾಚಲ ಪ್ರದೇಶದ ತನ್ನ ಭಾಗವೆಂದು ಹೇಳಿಕೊಂಡಿದೆ. ಅರುಣಾಚಲ ಪ್ರದೇಶದವರೆಗೆ ಚೀನಾ ಮುನ್ನುಗ್ಗಿದ್ದು, ಅದನ್ನು ಮುಚ್ಚಿಟ್ಟಿದ್ದಾರೆ. ಇವರೆಲ್ಲ ದೇಶ ಭಕ್ತರಾಗಲು ಹೇಗೆ ಸಾಧ್ಯ ? ಚುನಾವಣೆ ಸಮೀಪಿಸುತ್ತಿದ್ದು, ಅಡುಗೆ ಅನಿಲ ಬೆಲೆ 200ರೂ. ಇಳಿಸಿದ್ದಾರೆ. ಜನರ ಬಗ್ಗೆ ಕಳಕಳಿ ಇದ್ದಿದ್ದರೆ ನಾಲ್ಕು ವರ್ಷಮೊದಲೇ ಯಾಕೆ ಇಳಿಸಲಿಲ್ಲ ? ಒಂಭತ್ತ ವರ್ಷ ದೇಶ ಆಳಿದರೂ ಬಡವರು, ರೈತರಿಗಾಗಿ ಯಾವೊಂದು ಯೋಜನೆ ಜಾರಿ ಮಾಡಲಿಲ್ಲ. ಬದಲಿಗೆ ಧರ್ಮಗಳ ನಡುವೆ ಜಗಳ ತಂದಿಟ್ಟರು ಎಂದು ಕಿಡಿಕಾರಿದರು.
ಬರಗಾಲ ಘೋಷಿಸುವಂತೆ ಬಿಜೆಪಿಯವರು ಆಗ್ರಹಿಸಿದ್ದಾರೆ. ಬರ ಘೋಷಣೆಗೆ ಇರುವ ನಿಯಮ ಸಡಿಲಗೊಳಿಸಬೇಕಿದೆ. ಈ ಸಂಬಂಧ ಸಿಎಂ ಸಿದ್ದರಾಮಯ್ಯ ಕೇಂದ್ರಕ್ಕೆ ಎರಡು ತಿಂಗಳ ಹಿಂದೆಯೇ ಪತ್ರ ಬರೆದಿದ್ದಾರೆ. ಆದರೆ, ಉತ್ತರ ನೀಡಿಲ್ಲ. ಬಿಜೆಪಿ ಸಂಸದರಿಗೆ ರಾಜ್ಯದ ಜನರ ಕಾಳಜಿ ಇದ್ದರೆ ಈ ಬಗ್ಗೆ ಒತ್ತಾಯ ಮಾಡಲಿ. ನಾವು ಜನರಿಗೆ ಕೊಟ್ಟ ಮಾತಿನಂತೆ ಗ್ಯಾರಂಟಿ ಈಡೇರಿಸಿದ್ದೇವೆ. ಇವರಂತೆ ಖಾತೆಗೆ 15 ಲಕ್ಷ ರೂ. ಹಾಕುತ್ತೇವೆ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುತ್ತೇವೆಂದು ಪಂಗನಾಮ ಹಾಕಿಲ್ಲವೆಂದು ತಿರುಗೇಟು ನೀಡಿದರು.