ಜಿಲ್ಲೆ

ಬಿಜೆಪಿ ಸರ್ಕಾರದ ಸಾಧನೆ ಮನೆ, ಮನೆಗೆ ತಲುಪಿಸಿ

ಗುಂಡ್ಲುಪೇಟೆ: ಸರ್ಕಾರದ ಸಾಧನೆಗಳನ್ನು ಮನೆ, ಮನೆಗೆ ತಲುಪಿಸುವ ಮೂಲಕ ಕಾರ್ಯಕರ್ತರು ರಾಜ್ಯ ಹಾಗೂ ಕೇಂದದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವಂತೆ ಮಾಡಬೇಕು ಎಂದು ಬಿಜೆಪಿ ಯುವ ಮೋರ್ಚಾ ರಾಜ್ಯಾಧ್ಯಕ್ಷ ಡಾ.ಸಂದೀಪ್ ಕುಮಾರ್ ಹೇಳಿದರು.


ವಿಜಯ ಸಂಕಲ್ಪ ಯಾತ್ರೆಯ ಅಂಗವಾಗಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಗುರುವಾರ ಪಟ್ಟಣದ ದುಂದಾಸನಪುರ ಬಡಾವಣೆಯಲ್ಲಿ ಮನೆ-ಮನೆಗೆ ಪೋಸ್ಟರ್ ಹಚ್ಚುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ರಾಷ್ಟ್ರ ಮಟ್ಟದಲ್ಲಿ ನರೇಂದ್ರ ಮೋದಿ ಹಾಗೂ ರಾಜ್ಯದಲ್ಲಿ ಬೊಮ್ಮಾಯಿ ಸರ್ಕಾರ ಜನಸಾಮಾನ್ಯರಿಗೆ ಅನುಕೂಲಕರವಾದ ಉತ್ತಮ ಆಡಳಿತ ನೀಡುತ್ತಿದ್ದಾರೆ. ಶಾಸಕ ಸಿ.ಎಸ್.ನಿರಂಜನಕುಮಾರ್ ಹೆಚ್ಚಿನ ಅನುದಾನ ತಂದು ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುತ್ತಿದ್ದಾರೆ. ಆದ್ದರಿಂದ ಯುವ ಮೋರ್ಚಾ ಕಾರ್ಯಕರ್ತರು ಸರ್ಕಾರದ ಸಾಧನೆಗಳನ್ನು ಕ್ಷೇತ್ರದ ಮನೆ, ಮನೆಗಳಿಗೆ ತಲುಪುವಂತೆ ಮಾಡಬೇಕು ಎಂದು ಹೇಳಿದರು.

ನಂತರ ಮನೆ-ಮನೆಗಳಿಗೆ ಕರಪತ್ರ ವಿತರಣೆ, ಪೋಸ್ಟರ್ ಹಚ್ಚಿ ಪ್ರಮುಖ ರಸ್ತೆಗಳಲ್ಲಿ ಬೈಕ್ ರ‌್ಯಾಲಿ ನಡೆಸಿದರು. ಬಿಜೆಪಿ ಯುವ ಮೋರ್ಚಾ ರಾಜ್ಯ ಉಪಾಧ್ಯಕ್ಷ ಧೀರಜ್ ಪ್ರಸಾದ್, ಪ್ರಭಾರಿ ಮಹೇಶ್, ಜಿಲ್ಲಾಧ್ಯಕ್ಷ ಪ್ರಣಯ್ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.