ಕುಶಾಲನಗರ: ರಾಜ್ಯದ ಬಿಜೆಪಿ ಸರ್ಕಾರ, ಮಂತ್ರಿಗಳು ಮತ್ತು ಶಾಸಕರು ಅತ್ಯಂತ ಭ್ರಷ್ಟರಾಗಿದ್ದಾರೆ. ಹಿಂದೆಂದೂ ಇಷ್ಟು ಕೆಟ್ಟ ಆಡಳಿತವನ್ನು ನೋಡಿರಲಿಲ್ಲ ಎಂದು ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್ ಆರೋಪಿಸಿದರು.
ಕುಶಾಲನಗರದಲ್ಲಿ ಬುಧವಾರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಪೇ ಸಿಎಂ ಹೋರಾಟದಲ್ಲಿ ಮಾತನಾಡಿದ ಅವರು, ಭ್ರಷ್ಟ ಅಧಿಕಾರಿಗಳನ್ನು ಪ್ರೋತ್ಸಾಹಿಸುತ್ತಿರುವ ಮಡಿಕೇರಿ ಕ್ಷೇತ್ರ ಶಾಸಕರಿಗೆ ಏನು ಹೇಳಬೇಕು. ಇವರು ಎಷ್ಟು ಪ್ರಸೆಂಟ್ ಕಿಕ್‌ಬ್ಯಾಕ್ ಪಡೆಯುತ್ತಾರೆ ಎಂದು ಸಾರ್ವಜನಿಕರಿಗೆ ಗೊತ್ತಾಗಿದೆ. ಕುಶಾಲನಗರ ಪಪಂ ಮುಖ್ಯಾಧಿಕಾರಿ ಒಬ್ಬ ಪ್ರಾಮಾಣಿಕ. ಅಂತಹವರನ್ನು ಇಲ್ಲಿಂದ ಎತ್ತಂಗಡಿ ಮಾಡಿಸಿ ಹಲವು ಭ್ರಷ್ಟಾಚಾರ ಕೇಸುಗಳಲ್ಲಿ ಜೈಲು ಪಾಲಿಗಿದ್ದವರನ್ನು ಕರೆ ತರುವ ಪ್ರಯತ್ನ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಆರೋಪ ಮಾಡಿರುವಂತೆ ಶೇ.40 ಕಮಿಷನ್ ವಿರುದ್ಧ ಯಾವ ಬಿಜೆಪಿ ಜನಪ್ರತಿನಿಧಿಯೂ ಕೋರ್ಟ್‌ಗೆ ಹೋಗಿಲ್ಲವೆಂದರೆ ಆರೋಪವನ್ನು ಒಪ್ಪಿಕೊಂಡಂತೆ. ಹೀಗಾಗಿ, ಕರ್ನಾಟಕದ ಜನರು ಈ ಭ್ರಷ್ಟ ಬಿಜೆಪಿಯನ್ನು ಕಿತ್ತೊಗೆಯಲೇ ಬೇಕು ಎಂದು ತೀರ್ಮಾನ ಮಾಡಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪೇ ಸಿಎಂ ಸ್ಟಿಕರ್‌ಗಳನ್ನು ಅಂಟಿಸಲು ಪ್ರಯತ್ನಪಟ್ಟ ಕಾಂಗ್ರೆಸ್ ಕಾರ್ಯಕರ್ತರನ್ನು ಕುಶಾಲನಗರ ಪೊಲೀಸರು ಬಂಧಿಸಿದರು. ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಮೋದ ಮುತ್ತಪ್ಪ, ಮಾಜಿ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೊನ್ಸ್, ಕೆಪಿಸಿಸಿ ಕಾರ್ಯಕ್ರಮ ಸಂಯೋಜಕ ಮಂಜುನಾಥ್ ಗುಂಡೂರಾವ್, ಪಪಂ ಸದಸ್ಯರಾದ ಎಂ.ಕೆ.ದಿನೇಶ್, ಶೇಖ್ ಕಲಿಮುಲ್ಲ ಖಾನ್, ಪ್ರಮುಖರಾದ ಚಂದ್ರು, ಪ್ರಕಾಶ್, ಶಿವಶಂಕರ್, ರಜಾಕ್, ಆದಂ ಇತರರು ಇದ್ದರು.