ಜಿಲ್ಲೆ

ಬಿಜೆಪಿ ಸದಸ್ಯತ್ವ ಅಭಿಯಾನ ಯಶಸ್ಸಿಗೆ ಮುಂದಾಗಲಿ

ಹುಕ್ಕೇರಿ: ಕ್ಷೇತ್ರದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ಯಶಸ್ವಿಗೊಳಿಸಲು ಕಾರ್ಯಕರ್ತರು ಮತ್ತು ಮುಖಂಡರು ಮುಂದಾಗಬೇಕು ಎಂದು ಶಾಸಕ ನಿಖಿಲ ಕತ್ತಿ ಹೇಳಿದರು.

ಪಟ್ಟಣದ ಪಿಕಾರ್ಡ್ ಬ್ಯಾಂಕ್‌ನಲ್ಲಿ ಬುಧವಾರ ಏರ್ಪಡಿಸಿದ್ದ ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಮಾತನಾಡಿ, ಕ್ಷೇತ್ರದಲ್ಲಿ 1 ಲಕ್ಷ ಸದಸ್ಯ ನೋಂದಣಿ ಮಾಡುವ ಮೂಲಕ ರಾಜ್ಯದಲ್ಲಿ ಮಾದರಿಯಾಗಬೇಕು. ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಮೂಲಕ ಅಭಿವೃದ್ಧಿ ಕಾರ್ಯ ಮರೆತಿದೆ. ಗ್ಯಾರಂಟಿಯಿಂದ ರಾಜ್ಯದ ಜನ ಬೇಸತ್ತಿದ್ದಾರೆ. ಅದಕ್ಕಾಗಿ ಮತದಾರರು ಬಿಜೆಪಿಯತ್ತ ಮುಖಮಾಡುತ್ತಿದ್ದು, ಪಕ್ಷದ ಸದಸ್ಯತ್ವಕ್ಕೆ ಬೆಂಬಲಿಸುತ್ತಿದ್ದಾರೆ ಎಂದರು.

ಬಿಜೆಪಿ ಚಿಕ್ಕೋಡಿ ಜಿಲ್ಲಾಧ್ಯಕ್ಷ ಸತೀಶ ಅಪ್ಪಾಜಿಗೋಳ, ಮಂಡಲ ಅಧ್ಯಕ್ಷ ರಾಚಯ್ಯ ಹಿರೇಮಠ, ಮುಖಂಡ ಪ್ರಕಾಶ ಮುತಾಲಿಕ ಮಾತನಾಡಿ, ಜಗತ್ತಿನ ಬಹಳಷ್ಟು ದೇಶಗಳು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಹಿರಿತನ ಬಯಸುತ್ತಿವೆ. ಮೋದಿಯಿಂದ ಭಾರತದ ಕೀರ್ತಿ ಹೆಚ್ಚಿದೆ. ಹಾಗಾಗಿ ಬಿಜೆಪಿ ಸದಸ್ಯರಾಗಲು ಜನ ಬಯಸಿದ್ದಾರೆ. ಕಾರ್ಯಕರ್ತರು ಹೆಚ್ಚಿನ ಪ್ರಮಾಣದಲ್ಲಿ ನೋಂದಣಿ ಮಾಡಿಸಬೇಕು ಎಂದರು.

ಪ್ರಧಾನ ಕಾರ್ಯದರ್ಶಿ ಅಮೃತ ಕುಲಕರ್ಣಿ ಸದಸ್ಯತ್ವ ನೋಂದಣಿ ಕ್ರಮ ಕುರಿತು ಮಾಹಿತಿ ನೀಡಿದರು. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸತ್ಯಪ್ಪ ನಾಯಿಕ, ನಿಕಟಪೂರ್ವ ಜಿಲ್ಲಾಧ್ಯಕ್ಷ ರಾಜೇಶ ನೇರ್ಲಿ, ಮುಖಂಡರಾದ ಪರಗೌಡ ಪಾಟೀಲ ಗುರುರಾಜ ಕುಲಕರ್ಣಿ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ದುರದುಂಡಿಗೌಡ ಪಾಟೀಲ ಇತರರಿದ್ದರು. ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಶೀತಲ ಬ್ಯಾಳಿ ಸ್ವಾಗತಿಸಿ, ನಿರೂಪಿಸಿದರು.