ಜಿಲ್ಲೆ

ಬಿಜೆಪಿ ವ್ಯಕ್ತಿ ಕೇಂದ್ರಿತ ಪಕ್ಷವಲ್ಲ ; ಬಿಜೆಪಿ ರಾಜ್ಯ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿಕೆ

ತುಮಕೂರು : ತತ್ವ ಸಿದ್ಧಾಂತಗಳ ಭದ್ರ ನೆಲೆಗಟ್ಟಿನ ಮೇಲೆ ಕಟ್ಟಿರುವ ಭಾರತೀಯ ಜನತಾ ಪಕ್ಷವು ವ್ಯಕ್ತಿ ಕೇಂದ್ರಿತ ಪಕ್ಷವಲ್ಲ ಎಂದು ಬಿಜೆಪಿ ರಾಜ್ಯ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹೇಳಿದರು.

ನಗರದ ಕನ್ನಡ ಭವನದಲ್ಲಿ ಬಿಜೆಪಿ ಜಿಲ್ಲಾ ಘಟಕ ಸೇವಾ ಮತ್ತು ಸಮರ್ಪಣಾ ಅಭಿಯಾನದ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಸೇವಾ ಯಜ್ಞದಲ್ಲಿ ಸಮರ್ಪಿತ ಜೀವನ ಎಂಬ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಳೆದ 75 ವರ್ಷಗಳಲ್ಲಿ ಛಿದ್ರಗೊಂಡ ಸಮಾಜವನ್ನು ಒಂದುಗೂಡಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಹಿರಿಯರು ಕಂಡ ಕನಸು ನನಸಾಗುತ್ತಿದೆ ಎಂದರು.

ಏಳು ವರ್ಷಗಳಲ್ಲಿ ಭಾರತ ಬದಲಾಗುತ್ತಿದ್ದು ಭಾರತೀಯ ವಿಚಾರಧಾರೆಗಳಿಗೆ ಮನ್ನಣೆ ದೊರೆಯುತ್ತಿದೆ. ಹಳ್ಳಿಗಳಿಗೆ ಕುಡಿಯುವ ನೀರು, ರಸ್ತೆ, ವಿದ್ಯುತ್ ಸೇರಿ ಹಲವು ಸೌಲಭ್ಯಗಳು ದೊರೆಯುತ್ತಿವೆ. ಇಡೀ ಭಾರತವನ್ನು ನನ್ನ ಪರಿವಾರ ಎಂಬ ದೃಷ್ಟಿಯಿಂದ ಬಿಜೆಪಿ ನೋಡುತ್ತಿದೆ. ಸೇವೆಗೆ ಮತ್ತೊಂದು ಹೆಸರೇ ನರೇಂದ್ರಮೋದಿ ಎಂದು ತಿಳಿಸಿದರು.

ಜನಸಂಘದಿಂದ ಈವರೆಗೆ ಬಿಜೆಪಿ ಅಧಿಕಾರದಲ್ಲಿ ಇರಲಿ, ಇಲ್ಲದಿರಲಿ ರಾಷ್ಟ್ರೀಯತೆಯ ವಿಚಾರದಲ್ಲಿ ಎಂದಿಗೂ ರಾಜಿ ಮಾಡಿಕೊಂಡಿಲ್ಲ, ಬಂಡವಾಳಶಾಹಿ, ಎಡಪಂಕ್ತೀಯ ವಿಚಾರಗಳಿಗೆ ಬದಲಾಗಿ ಪಂಡಿತ ದೀನ ದಯಾಳ್ ಉಪಾಧ್ಯಾಯ ಅವರು ನೀಡಿದ ಸಮತೋಲನ ಸಿದ್ಧಾಂತದ ಮೇಲೆ ಪ್ರತಿಯೊಬ್ಬರಿಗೂ ಸೌಲಭ್ಯ ದೊರೆಯಬೇಕು ಎಂಬ ಮೂಲ ಆಶಯವನ್ನು ಬಿಜೆಪಿ ಹೊಂದಿದೆ ಎಂದು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು.

ರಾಷ್ಟ್ರೀಯತೆ ಎಂಬ ವಿಚಾರವನ್ನು ತನ್ನ ಪ್ರಮುಖ ಅಂಶವಾಗಿಟ್ಟುಕೊಂಡು 1956ರಿಂದಲೂ ಕಾರ್ಯನಿರ್ವಹಿಸುತ್ತಿರುವ ಪಕ್ಷ ನಮ್ಮದಾಗಿದೆ. ಜನಸಂಘದಲ್ಲಿ ಕೊಂಚ ಹಿನ್ನೆಡೆ ಯಾದರೂ, ಬಿಜೆಪಿ ಪಕ್ಷ ಕಟ್ಟಿದ ನಂತರ ಇಡೀ ಭಾರತವನ್ನು ತಲುಪಲು ಸಾಧ್ಯವಾಗಿದೆ. ಅಟಲ್‌ಜೀ, ಅಡ್ವಾಣಿ ಅವರ ಕನಸುಗಳನ್ನು ನರೇಂದ್ರಮೋದಿ ಹಾಗೂ ಅಮಿತ್ ಷಾ ನನಸು ಮಾಡುತ್ತಿದ್ದಾರೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಪಿಗೆ ಶ್ರೀಧರ್ ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜೆಪಿ ಉಪಾಧಕ್ಷ ಪಾವಗಡ ರವಿ ವಹಿಸಿದ್ದರು. ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ಬಿ.ನಂದೀಶ್, ಪ್ರೇಮಾ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.

ದೇಶದ ಐಕ್ಯತೆ ಹಾಗೂ ಸಮಗ್ರತೆಯ ಉಳಿವಿಗಾಗಿ ಇರುವ ಏಕೈಕ ಆಯ್ಕೆ ಬಿಜೆಪಿ. ಹಾಗಾಗಿ, ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತರು ಮೋದಿ ಅವರ ಕೈ ಬಲಪಡಿಸುವ ಕೆಲಸವನ್ನು ಮಾಡಬೇಕಿದೆ. ಜಿ.ಬಿ.ಜ್ಯೋತಿಗಣೇಶ್ ನಗರ ಶಾಸಕ