ಮೈಸೂರು: ‘ನಾನೂ ರೌಡಿ, ನಿಮ್ಮ ಪಕ್ಷದಲ್ಲಿ ನನಗೂ ಸ್ಥಾನ ಕೊಡುವಿರಾ’ ಎನ್ನುವ ಫಲಕ ಹಿಡಿದು ರೌಡಿಶೀಟರ್ ನಗರದಲ್ಲಿ ಶನಿವಾರ ಏಕಾಂಗಿಯಾಗಿ ಪ್ರತಿಭಟನೆ ನಡೆಸಿದರು.
ಜಿಲ್ಲಾ ನ್ಯಾಯಾಲಯ ಮುಂಭಾಗ ಇರುವ ಗಾಂಧಿ ಪುತ್ಥಳಿ ಮುಂದೆ ದೊಡ್ಡ ಫ್ಲೆಕ್ಸ್ ಹಿಡಿದು ಮಂಜು ಅಲಿಯಾಸ್ ಪಾನಿಪುರಿ ಮಂಜ ಕೆಲಕಾಲ ಪ್ರತಿಭಟನೆ ನಡೆಸಿದರು.
ಆದಿಚುಂಚನಗಿರಿಯ ಶ್ರೀಬಾಲಗಂಗಾಧರನಾಥ ಸ್ವಾಮೀಜಿ, ಸಿದ್ಧಗಂಗಾ ಮಠದ ಶ್ರೀ ಡಾ.ಶಿವಕುಮಾರ ಸ್ವಾಮೀಜಿ, ಕನಕದಾಸರು, ವಾಲ್ಮೀಕಿ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಭಾವಚಿತ್ರವನ್ನು ಫ್ಲೆಕ್ಸ್‌ಗೆ ಅಳವಡಿಸಿದ್ದರು. ಜತೆಗೆ ಅದರಲ್ಲಿ ‘ಬಿಜೆಪಿಗರೇ, ನಾನೂ ರೌಡಿ ಶೀಟರ್. ನನಗೂ ನಿಮ್ಮ ಪಕ್ಷದಲ್ಲಿ ಸ್ಥಾನ ಕೊಡುವಿರಾ?’ ಎಂದು ಬರೆಯಲಾಗಿತ್ತು.
ಫಲಕ ಹಿಡಿದು ಏಕಾಂಗಿಯಾಗಿ ಪ್ರತಿಭಟನೆ ನಡೆಸುತ್ತಿದ್ದ ಮಂಜನ್ನು ಕೆ.ಆರ್.ಠಾಣೆ ಪೊಲೀಸರು ವಶಕ್ಕೆ ಪಡೆದು, ಹೆಚ್ಚಿನ ವಿಚಾರಣೆಗೆ ಉದಯಗಿರಿ ಠಾಣೆ ಪೊಲೀಸರಿಗೆ ಹಸ್ತಾಂತರಿಸಿದರು.
ಗಣೇಶನಗರದ ಮಂಜ, 2013ರಲ್ಲಿ ಕೊಲೆ ಪ್ರಕರಣವೊಂದರಲ್ಲಿ ಜೈಲು ಸೇರಿ ಶಿಕ್ಷೆ ಮುಗಿಸಿ ವಾಪಸ್ ಬಂದಿದ್ದರೂ ಉದಯಗಿರಿ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಪಟ್ಟಿ ಹಾಗೆಯೇ ಇದೆ.
ಪ್ರತಿಭಟನೆ ನಡೆಸಿರುವ ಮಂಜ, ಯಾವುದಾದರೂ ಪಕ್ಷಗಳೊಂದಿಗೆ ಗುರುತಿಸಿಕೊಂಡಿರುವ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಮಾಹಿತಿ ತಿಳಿದು ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.