ಚಿಕ್ಕಮಗಳೂರು: ಅಂಬೇಡ್ಕರ್ ವಾದಿ ನಾಯಕ ಪ್ರಿಯಾಂಕ್ ಖರ್ಗೆ ವಿರುದ್ಧ ಬಿಜೆಪಿ ನಾಯಕರು ತಮ್ಮ ಪಕ್ಷದ ವಿಧಾನ ಪರಿಷತ್ ಸದಸ್ಯರನ್ನು ಎತ್ತಿಕಟ್ಟುತ್ತಿದ್ದಾರೆ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಮಂಗಳವಾರ ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಬಾಲಕೃಷ್ಣ ಬಿಳೇಕಲ್ಲು, ಸಚಿವ ಪ್ರಿಯಾಂಕ್ ಖರ್ಗೆ ಅವರ ಜನಪರ ಆಡಳಿತವನ್ನು ಸಹಿಸಿಕೊಳ್ಳದ ರಾಜ್ಯದ ಬಿಜೆಪಿ ನಾಯಕರು ತಮ್ಮ ಪಕ್ಷದ ಎಂಎಲ್‌ಸಿಗಳಾದ ಛಲವಾದಿ ನಾರಾಯಣಸ್ವಾಮಿ ಮತ್ತು ಎನ್.ರವಿಕುಮಾರ್ ಅವರನ್ನು ಎತ್ತಿಕಟ್ಟುತ್ತಿರುವುದು ನಾಚಿಕೇಡಿನ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಲಿತ ವಿರೋಧಿ, ಅಂಬೇಡ್ಕರ್ ಸಮುದಾಯ ವಂಚಕ ಛಲವಾದಿ ನಾರಾಯಣಸ್ವಾಮಿ ಹಾಗೂ ಪ್ರಿಯಾಂಕ್ ಖರ್ಗೆ ಹೆಸರಿಗೆ, ವ್ಯಕ್ತಿತ್ವಕ್ಕೆ, ಕುಟುಂಬಕ್ಕೆ ಧಕ್ಕೆ ತಂದಿರುವ ಹಾಗೂ ಜನಾಂಗಕ್ಕೆ ತಪ್ಪು ಸಂದೇಶ ರವಾನಿಸುತ್ತಿರುವ ರವಿಕುಮಾರ್ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ ಅವರು, ಮುಂದಿನ ದಿನಗಳಲ್ಲಿ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನ ಈ ರೀತಿಯ ನಡೆಯನ್ನು ಖಂಡಿಸಿ ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಕಲಬುರ್ಗಿ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ನಡೆದ ಪ್ರತಿಭಟನೆ ರ‍್ಯಾಲಿಯಲ್ಲಿ ಕಲಬುರ್ಗಿ ಜಿಲ್ಲಾ ಧಿಕಾರಿ ನೆರೆದೇಶದಿಂದ ಬಂದವರAತೆ ಕಾಣುತ್ತಾರೆ ಎಂದು ಅಗೌರವ, ಸಂವಿಧಾನ ವಿರೋಧಿ ಪದವನ್ನು ಬಳಸಿ, ಜನರ ಹಾಗೂ ಐಎಎಸ್ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿರುವ ವಿಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ಹೇಳಿಕೆಯನ್ನು ಖಂಡಿಸುತ್ತೇವೆ ಎಂದು ಹೇಳಿದರು.
ಉತ್ತಮ ಆಡಳಿತ ನೀಡುತ್ತಿರುವ ಕಲಬುರ್ಗಿ ಜಿಲ್ಲಾಧಿಕಾರಿ ಫೌಜಿಜಾ ತರನುಂ ವಿರುದ್ಧ ಅವಮಾನಕಾರಿ ಹೇಳಿಕೆಯನ್ನು ರವಿಕುಮಾರ್ ನೀಡಿದ್ದಾರೆ. ಈ ಬಗ್ಗೆ ಕ್ಷಮೆಯಾಚಿಸುವಂತೆ ಹೈಕೋರ್ಟ್ ತಾಕಿತು ಮಾಡಿದೆ. ಆದರೂ ಜವಾಬ್ದಾರಿ ಸ್ಥಾನದಲ್ಲಿರುವ ರವಿಕುಮಾರ್ ಅವರ ನಡವಳಿಕೆ ತರವಲ್ಲ. ಕೂಡಲೇ ಅವರನ್ನು ಎಂಎಲ್‌ಸಿ ಸ್ಥಾನದಿಂದ ಅನರ್ಹಗೊಳಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಡಿಎಸ್‌ಎಸ್ ಜಿಲ್ಲಾ ಸಂಘಟನಾ ಸಂಚಾಲಕರಾದ ಯೋಗೀಶ್, ಸತೀಶ್, ಗಿರೀಶ್, ತಾಲೂಕು ಸಂಚಾಲಕ ಪ್ರಸನ್ನ, ಖಜಾಂಚಿ ಸಿದ್ದಪ್ಪ, ಮಹಿಳಾ ಸಂಘಟನಾ ಸಂಚಾಲಕಿ ಸರೋಜ, ಮುಖಂಡರಾದ ಚಂದ್ರು, ಉಮೇಶ್, ವಸಂತ್, ರಾಜೇಶ್, ರಘು, ಪವಿತ್ರ, ಪ್ರಮಿಳಾ ಮತ್ತಿತರರಿದ್ದರು.