ಬಾಗಲಕೋಟೆ: ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪ್ರಜಾಧ್ವನಿ ಸಮಾವೇಶ ನಡೆಸುತ್ತಿರುವ ಕಾಂಗ್ರೆಸ ಪಕ್ಷ ಬುಧವಾರ ಬಾಗಲಕೋಟೆ ನಗರದಲ್ಲಿ ನಡೆದ ಸಮಾವೇಶದಲ್ಲಿ ತಮ್ಮ ಪಕ್ಷಕ್ಕೆ ಅಧಿಕಾರ ನೀಡಿದರೆ ಜನಪರ ಕಾರ್ಯಕ್ರಮಗಳನ್ನು ನೀಡುವುದರ ಜೊತೆಗೆ ಬಿಜೆಪಿ ಆಡಳಿತದಲ್ಲಿ ನಡೆದಿರುವ ಎಲ್ಲ ಹಗರಣಗಳು ಹಾಗೂ ಭ್ರಷ್ಟಾಚಾರದ ತನಿಖೆಗೆ ಪ್ರತ್ಯೇಕ ಆಯೋಗ ರಚಿಸುವುದಾಗಿ ಘೋಷಿಸಿದೆ.
ಬಾಗಲಕೋಟೆ ನಗರದ ಕಾಳಿದಾಸ ಕಾಲೇಜು ಮೈದಾನದಲ್ಲಿ ಕಾಂಗ್ರೆಸ್ಸಿನ ಪ್ರಜಾಧ್ವನಿ ಸಮಾವೇಶಕ್ಕೆ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರದಿಂದ ಹೆಚ್ಚಿನ ಸಂಖ್ಯೆಯ ಕಾರ್ಯಕರ್ತರು ಭಾಗವಹಿಸಿದ್ದರು. ಕಾರ್ಯಕ್ರಮದುದ್ದಕ್ಕೂ ಕೈ ನಾಯಕರು ಪೈಪೋಟಿಗೆ ಇಳಿದವರಂತೆ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು. ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಸರ್ಕಾರ ಹಾಗೂ ಸದ್ಯದ ಬಿಜೆಪಿ ಸರ್ಕಾರ ತನ್ನ ಪ್ರನಾಳಿಕೆಯನ್ನು ಅನುಷ್ಠಾನದ ಬಗ್ಗೆ ಬಹಿರಂಗ ಚರ್ಚೆಗೆ ಬರುವಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ರಣವೀಳ್ಯೆ ನೀಡಿದ್ದಾರೆ. ಈ ವಿಚಾರದಲ್ಲಿ ನಿಮ್ಮ ದಮ್, ತಾಕತ್ ಪ್ರದರ್ಶನವಾಗಲಿ ಎಂದು ಸವಾಲ್ ಎಸೆದಿದ್ದಾರೆ.
೨೦೧೮ ರಲ್ಲಿ ಬಿಜೆಪಿ ರಾಜ್ಯದ ಜನರಿಗೆ ೬೦೦ ಭರವಸೆಗಳನ್ನು ನೀಡಿತ್ತು. ಅದರಲ್ಲಿ ೫೦ ಭರವಸೆ ಕೂಡ ಈಡೇರಿಸಲಿಲ್ಲ. ನೀವು ವಚನ ಭ್ರಷ್ಟರು. ನೀರಾವರಿಗೆ ೧.೫ ಲಕ್ಷ ಕೋಟಿ ರೂ. ಖರ್ಚು ಮಾಡುತ್ತೇನೆ ಅಂತ ಹೇಳಿ, ಏನು ಮಾಡಲಿಲ್ಲ. ಮಹಿಳೆಯರಿಗಾಗಿ ನೀಡಿದ್ದ ಯಾವ ಭರವಸೆಯನ್ನು ಅನುಷ್ಠಾನಗೊಳಿಸಿಲ್ಲ ಎಂದು ಸಿಎಂಗೆ ಚುಚ್ಚಿದರು.
ನಮ್ಮ ಸರ್ಕಾರಕ್ಕೆ ಅವಕಾಶ ನೀಡಿದಲ್ಲಿ ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳಾದ ಕೃಷ್ಣಾ ಮೇಲ್ದಂಡೆ, ಮಹದಾಯಿ, ನವಲಿ ಜಲಾಶಯ ನಿರ್ಮಾಣ ಸೇರಿದಂತೆ ಎಲ್ಲ ನೀರಾವರಿ ಯೋಜನೆಗಳಿಗೆ ೨ ಲಕ್ಷ ಕೋಟಿ ರೂ. ಖರ್ಚು ಮಾಡುತ್ತೇವೆ. ನೀರಾವರಿ ಭೂಮಿ ಕಳೆದುಕೊಳ್ಳುವ ರೈತರಿಗೆ ನ್ಯಾಯ ಸಮ್ಮತ ಬೆಲೆ ನೀಡಲಾಗುವುದು ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮಾತನಾಡಿ, ಕುವೆಂಪು, ಕನಕದಾಸರು, ಶಿಶುನಾಳ ಶರೀಪರ ನಾಡಲ್ಲಿ ಬಿಜೆಪಿ ಶಾಂತಿ ಕದಡುವ ಕೆಲಸ ಮಾಡಿದೆ. ಕರ್ನಾಟಕ ಜನರ ಸಮಸ್ಯೆ ಪರಿಹಸಲು ಮುಂದಾಗಿಲ್ಲ. ಅಪರೇಷನ್ ಲೋಟಸ್ ಮೂಲಕ ಅಧಿಕಾರಕ್ಕೆ ಬಂದ ಬಿಜೆಪಿ ಭ್ರಷ್ಟಾಚಾರದಲ್ಲಿ ತೊಡಗಿದೆ. ಕೋವಿಡ್ ಬಂದಾಗ ಜನರ ಸಂಕಷ್ಟಕ್ಕೆ ಸಹಾಯ ಮಾಡದೇ ಪ್ರಧಾನಮಂತ್ರಿ ಮೋದಿ ಅವರು ಜನರಿಗೆ ಚಪ್ಪಾಳೆ ತಟ್ಟಿ, ಜಾಗಟೆ ಹೊಡೆಯಿರಿ ಅಂತ ಹೇಳಿದರು. ಡಬಲ್ ಇಂಜಿನ್ ಸರ್ಕಾರ ಯಾವ ಅಭಿವೃದ್ಧಿ ಕೆಲಸವನ್ನು ಮಾಡಲಿಲ್ಲ. ತಮ್ಮ ಪಕ್ಷದ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಭ್ರಷ್ಟಾಚಾರ ಆರೋಪ ಮಾಡಿದರು ತನಿಖೆ ಮಾಡಲಿಲ್ಲ ಅಂತ ಬಿಜೆಪಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಎಐಸಿಸಿ ರಾಜ್ಯ ಉಸ್ತುವಾರಿ ರಣದೀಪ ಸಿಂಗ್ ಸುರ್ಜಿವಾಲ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ, ಯಾತ್ರೆ ಉಸ್ತುವಾರಿ ಬಸವರಾಜ ರಾಯರಡ್ಡಿ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ, ಮಾಜಿ ಸಚಿವ ಶಾಸಕ ಎಚ್.ಕೆ.ಪಾಟೀಲ, ಆನಂದ ನ್ಯಾಮಗೌಡ, ವಿ.ಪ ಸದಸ್ಯರಾದ ಪ್ರಕಾಶ ಹುಕ್ಕೇರಿ, ಸುನೀಲಗೌಡ ಪಾಟೀಲ, ಮಾಜಿ ಸಚಿವರಾದ ಎಸ್.ಆರ್.ಪಾಟೀಲ, ಬಿ.ಬಿ.ಚಿಮ್ಮನಕಟ್ಟಿ, ಎಚ್.ವೈ.ಮೇಟಿ, ಆರ್.ಬಿ.ತಿಮ್ಮಾಪುರ, ಅಜಯಕುಮಾರ ಸರನಾಯಕ, ಉಮಾಶ್ರೀ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ, ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ. ಮುಖಂಡರಾದ ಕ್ರಿಸ್ಟೋಫರ್ ತಿಲಕ್, ಸತೀಶ ಬಂಡ್ಡಿವಡ್ಡರ, ಪುಷ್ಪಾ ಅಮರನಾಥ್, ವೀಣಾ ಕಾಶಪ್ಪನವರ ಸೇರಿದಂತೆ ಇತರರು ಇದ್ದರು.