ಜಿಲ್ಲೆ

ಬಿಜೆಪಿ ವಿಪಕ್ಷ‌ ನಾಯಕನ ಆಯ್ಕೆ ಮಾಡದ ಸ್ಥಿತಿಗೆ ಬಂದಿದೆ ಮಾಜಿ‌ ಸಿಎಂ‌ ಜಗದೀಶ ಶೆಟ್ಟರ್ ವ್ಯಂಗ್ಯ

ಕೊಪ್ಪಳ: ಬಿಜೆಪಿಯಲ್ಲಿ ಅರಾಜಕತೆ ಹೆಚ್ಚಿದೆ. ಅಧಿವೇಶನ ಮುಗಿದರೂ ವಿಪಕ್ಷ ನಾಯಕನನ್ನು ಆಯ್ಕೆ ಮಾಡದ ಶೋಚನೀಯ ಸ್ಥಿತಿ ತಲುಪಿದೆ ಎಂದು ಮಾಜಿ ಸಿಎಂ, ವಿಪ ಸದಸ್ಯ ಜಗದೀಶ ಶೆಟ್ಟರ್ ವ್ಯಂಗ್ಯವಾಡಿದರು.

ನಗರದಲ್ಲಿ ಬುಧವರ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದರು.

ಬಿಜೆಪಿ ಎಲ್ಲವನ್ನೂ ನೀಡಿದೆ. ಅದರಂತೆ ನಾವು ಪಕ್ಷಕ್ಕಾಗಿ ದುಡಿದಿದ್ದೇವೆ. ನನಗೆ ಅಗೌರವ ತೋರಿಸಕ್ಕೆ ಪಕ್ಷ ತೊರೆದೆ. ಇಂದು ಶೋಚನೀಯ ಸ್ಥಿತಿ ಬಿಜೆಪಿಗೆ ಬಂದಿದೆ. ವಿಪಕ್ಷ ನಾಯಕನನ್ನು ಆಯ್ಕೆ ಮಾಡುತ್ತಿಲ್ಲ. ಮತ್ತೊಂದೆಡೆ ಅವಧಿ ಮುಗಿದರೂ ಬಿಜೆಪಿ ರಾಜ್ಯಾಧ್ಯಕ್ಷನನ್ನು ಆಯ್ಕೆ ಮಾಡಲಾಗದ ಸ್ಥಿತಿಗೆ ಬಂದಿದೆ. ನಮ್ಮಂಥ ಹಿರಿಯ ನಾಯಕರನ್ನು ಕಡೆಗಣಿಸಿದರ ಪ್ರತಿಫಲ ಇದು ಎಂದು ಛೇಡಿಸಿದರು.

ಲೋಕಸಭೆಗೆ ಅಭ್ಯರ್ಥಿಗಳ ಬಗ್ಗೆ ಚರ್ಚೆಯಾಗಿಲ್ಲ. ಸದ್ಯ 136 ಸ್ಥಾನ ಪಡೆದು ರಾಜ್ಯದಲ್ಲಿ ಗಟ್ಟಿಯಾಗಿದೆ. ಬರುವ ಲೋಕಸಭೆ ಚುನಾವಣೆಯಲ್ಲಿ 15ಕ್ಕೂ ಹೆಚ್ಚು ಸ್ಥಾನಗಳು ಕಾಂಗ್ರೆಸ್ ಗೆ ಬರಲಿವೆ. ಕಾಂಗ್ರೆಸ್ ನನಗೆ ಕೊಟ್ಟ ಮಾತಿನಂತೆ ಗೌರವದಿಂದ ನಡೆಸಿಕೊಂಡಿದೆ. ನನ್ನನ್ನು ವಿಧಾನ ಪರಿಷತ್ ಗೆ ಆಯ್ಕೆ ಮಾಡಿದ್ದಾರೆ. ಪಕ್ಷ ಸೂಚಿಸಿದ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿಕೊಂಡು ಹೋಗುವೆ ಎಂದರು.

ಶಾಸಕರು ಸಿಎಂಗೆ ಪತ್ರ ಬರೆದ ಬಗ್ಗೆ ಪ್ರತಿಕ್ರಿಯಿಸಿ, ಶಾಸಕಾಂಗ‌ ಸಭೆ ಕರೆಯುವಂತೆ ಪತ್ರ ಬರೆದಿದ್ದಾಗಿ ಶಾಸಕರು ತಿಳಿಸಿದ್ದಾರೆ. ಅದರಲ್ಲಿ ತಪ್ಪೇನಿಲ್ಲ. ಸರ್ಕಾರ ಅಸ್ಥಿರಗೊಳಿಸುವ ಬಗ್ಗೆ ನನಗೆ ಮಾಹಿತಿ ಇಲ್ಲ. ಸದ್ಯ ಬಿಜೆಪಿಯಲ್ಲಿ ಯಾವ ತತ್ವ, ಸಿದ್ಧಾಂತ ಇಲ್ಲ. ಕೆಲವರ ಹಿತಾಸಕ್ತಿಗಾಗಿ ಪಕ್ಷ ಇದೆ ಎಂದರು.