ಮೈಸೂರು: ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಹಮ್ಮಿಕೊಂಡಿದ್ದು, ಮಾ.1 ರಂದು ಬೆಳಗ್ಗೆ 11ಕ್ಕೆ ಚಾಮರಾಜನಗರ ಜಿಲ್ಲೆಯ ಮಲೈಮಹದೇಶ್ವರ ಬೆಟ್ಟದಲ್ಲಿ ಯಾತ್ರೆಗೆ ಚಾಲನೆ ದೊರೆಯಲಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ. ರಾಜೇಂದ್ರ ತಿಳಿಸಿದರು.
ಯಾತ್ರೆಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಚಾಲನೆ ನೀಡುವರು. ನಂತರ ಮಧ್ಯಾಹ್ನ 1ಕ್ಕೆ ಹನೂರಿನಲ್ಲಿ ಸಾರ್ವಜನಿಕ ಸಭೆ ಹಮ್ಮಿಕೊಳ್ಳಲಾಗಿದ್ದು, 15 ರಿಂದ 20 ಸಾವಿರ ಜನರು ಭಾಗವಹಿಸಲಿದ್ದಾರೆ. ಸಭೆಯನ್ನುದ್ದೇಶಿಸಿ ಜೆ.ಪಿ. ನಡ್ಡಾ ಮಾತನಾಡಲಿದ್ದಾರೆ. ಸಚಿವ ರಾದ ವಿ. ಸೋಮಣ್ಣ, ವಿ ಸುನಿಲ್ ಕುವಾರ್, ಕೋಟಾ ಶ್ರೀನಿವಾಸ ಪೂಜಾರಿ, ಆರಗ ಜ್ಞಾನೇಂದ್ರ, ಕೆ.ಗೋಪಾಲಯ್ಯ, ಎಸ್.ಅಂಗಾರ, ಸಂಸದ ವಿ.ಶ್ರೀವಾಸಪ್ರಸಾದ್, ಶಾಸಕ ಎನ್.ಮಹೇಶ್, ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹಾಗೂ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಾ.1, 2 ರಂದು ಚಾಮರಾಜನಗರ ಜಿಲ್ಲೆಯಲ್ಲಿ, 2 ರಿಂದ 5ರವರೆಗೆ ಮೈಸೂರು ನಗರ ಮತ್ತು ಗ್ರಾಮಾಂತರ ಭಾಗದಲ್ಲಿ, 6 ರಿಂದ 8ರವರೆಗೆ ಮಂಡ್ಯ ಜಿಲ್ಲೆಯಲ್ಲಿ, 8 ರಿಂದ 10ರವರೆಗೆ ಹಾಸನ ಜಿಲ್ಲೆಯಲ್ಲಿ, ಮಾ.10, 11 ರಂದು ಕೊಡಗು ಜಿಲ್ಲೆಯಲ್ಲಿ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಅಧಿಕಾರಕ್ಕೇರುವುದು ನಿಶ್ಚಿತ. ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಷಾ ಜೋಡಿ ರಾಜ್ಯಕ್ಕೆ ಆಗಿಂದಾಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸಿಗರಿಗೆ ನಡುಕ ಹುಟ್ಟಿದೆ. ಇದನ್ನು ಸಹಿಸದ ಕಾಂಗ್ರೆಸಿಗರು ಸುಳ್ಳು ಆರೋಪಗಳನ್ನು ಮಾಡುವ ಮೂಲಕ ಜನರ ಗಮನವನ್ನು ಬೇರೆಡೆಗೆ ಸೆಳೆಯುತ್ತಿದ್ದಾರೆ ಎಂದು ಟೀಕಿಸಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಅವರು ನಮ್ಮ ಪಕ್ಷದ ಹಿರಿಯ ನಾಯಕರು. ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಮರಳಿ ಅಧಿಕಾರಕ್ಕೆ ತರುವುದೇ ನನ್ನ ಗುರಿ ಎಂದು ಸ್ವತಃ ಯಡಿಯೂರಪ್ಪ ಹೇಳಿದ್ದಾರೆ. ಆದರೆ ಯಡಿಯೂರಪ್ಪ ವಿಚಾರದಲ್ಲಿ ಕಾಂಗ್ರೆಸಿಗರು ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಪ್ರಮುಖರಾದ ಎಸ್..ಮಹದೇವಯ್ಯ, ಟಿ.ಎಸ್.ಶ್ರೀವತ್ಸ, ಮಂಗಳಾ ಸೋಮಶೇಖರ್, ಮಡಹಳ್ಳಿ ಮಹೇಶ್, ಗೋಪಾಲಯ್ಯ, ಮಹೇಶ್ ರಾಜೇ ಅರಸ್, ಪ್ರದೀಪ್ ಕುಮಾರ್ ಇದ್ದರು.