ಶ್ರೀರಂಗಪಟ್ಟಣ: ತಾಲೂಕಿನ ಬೆಳಗೊಳ ಹೋಬಳಿ ವ್ಯಾಪ್ತಿಯಲ್ಲಿ ಬೆಲೆ ಬಾಳುವ ಸರ್ಕಾರಿ ಜಾಗವನ್ನು ಖಾಸಗಿ ವ್ಯಕ್ತಿಗಳು ರಾಜಾರೋಷವಾಗಿ ಒತ್ತುವರಿ ಮಾಡಿ ನಿವೇಶನಗಳನ್ನು ಮಾಡಿ ಮಾರಾಟ ಮಾಡುತ್ತಿದ್ದು, ಸರ್ಕಾರಿ ಅಧಿಕಾರಿಗಳು ಈ ಭೂಮಿಗೆ ನಕಲಿ ದಾಖಲೆ ಸೃಷ್ಟಿಸಿಕೊಡುವ ಮೂಲಕ ಅಕ್ರಮಕ್ಕೆ ಕೈ ಜೋಡಿಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ರೈತ ಮೋರ್ಚಾ ಕಾರ್ಯಕರ್ತರು ಪ್ರತಿಭಟಿಸಿದರು.
ಪಟ್ಟಣದ ತಾಲೂಕು ಪಂಚಾಯತಿ ಕಾರ್ಯಾಲಯ ಮುಂಭಾಗ ಶನಿವಾರ ಬಿಜೆಪಿ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಕೆ.ಎಸ್.ನಂಜುಂಡೇಗೌಡ ನೇತೃತ್ವದಲ್ಲಿ ಧರಣಿ ಕುಳಿತ ಕಾರ್ಯಕರ್ತರು ತಾಲೂಕು ಪಂಚಾಯಿತಿ ಹಾಗೂ ತಾಲೂಕು ಆಡಳಿತದ ವಿರುದ್ಧ ಘೋಷಣೆ ಕೂಗಿದರು.
ಮುಖಂಡ ಕೆ.ಎಸ್.ನಂಜುಂಡೇಗೌಡ ಮಾತನಾಡಿ, ಮೈಸೂರು ನಗರಕ್ಕೆ ಸಮೀಪದಲ್ಲೇ ಹೊಂದಿಕೊಂಡಿರುವಂತಹ ತಾಲೂಕಿನ ಗಡಿ ಗ್ರಾಮ ಪಂಚಾಯಿತಿಗಳಲ್ಲಿ ಭೂಮಿಗೆ ಚಿನ್ನದ ದರ ಇರುವ ಕಾರಣ ಸಾಕಷ್ಟು ವ್ಯಕ್ತಿಗಳು ಸರ್ಕಾರಿ ಭೂಮಿಗಳನ್ನು ಒತ್ತುವರಿ ಹಾಗೂ ಅತಿಕ್ರಮ ಮಾಡುವುದು ನಿರಂತರವಾಗಿ ನಡೆದಿದೆ. ತಾಲೂಕಿನ ಹೊಸುಂಡುವಾಡಿ ಗ್ರಾಮದ ಸರ್ವೇ ನಂ.76 ರಲ್ಲಿ ಖಾಸಗಿ ವ್ಯಕ್ತಿಯೊಬ್ಬ ಅಕ್ರಮವಾಗಿ ಸುಮಾರು 2 ಎಕರೆ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿ ಅನ್ಯಕ್ರಾಂತ, ಭೂ ಪರಿವರ್ತನೆ ಮಾಡಿಸದೆ ಈಗಾಗಲೇ ಇ-ಸ್ವತ್ತು ಪಡೆದಿರುವ ಬಗ್ಗೆ ಮಾಹಿತಿ ಇದ್ದು, ಜನರಿಗೆ ನಿವೇಶನ ಹಂಚಿಕೆ ಮಾಡಲು ಮುಂದಾಗಿದ್ದಾರೆ. ಇಂತಹ ಪ್ರಕರಣಗಳು ತಾಲೂಕಿನೆಲ್ಲೆಡೆ ನಡೆಯುತ್ತಿರುವ ಅಕ್ರಮಕ್ಕೆ ಸಾಕ್ಷಿಯಾಗಿದೆ.
ಆಯಾ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳ ಪಿಡಿಒ, ತಾಲೂಕು ಆಡಳಿತ ಕಂದಾಯ ಇಲಾಖೆ ಅಧಿಕಾರಿಗಳು ಇಂತಹ ಭೂ ಮಾಫಿಯಾದಲ್ಲಿ ನೇರವಾಗಿ ಖಾಸಗಿ ವ್ಯಕ್ತಿಗಳೊಂದಿಗೆ ಕೈಜೋಡಿಸಿದ್ದು, ಕೋಟಿಗಳ ಲೆಕ್ಕದಲ್ಲಿ ಹಣ ಪಡೆದು ಸರ್ಕಾರಿ ಜಮೀನುಗಳನ್ನೇ ಖಾಸಗಿ ವ್ಯಕ್ತಿಗಳಿಗೆ ಅನುಕೂಲಕರ ರೀತಿಯಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ನೀಡುತ್ತಿದ್ದಾರೆ. ಈ ರೀತಿ ಭೂ ಪರಿವರ್ತನೆ ಮಾಡಲು ಗ್ರಾಮ ಪಂಚಾಯತಿಗಳಿಗೆ ಯಾವುದೇ ಅಧಿಕಾರವಿಲ್ಲ. ಈ ಬಗ್ಗೆ ಪ್ರಶ್ನಿಸಿ ಕ್ರಮಕೈಗೊಳ್ಳಲು ತಾಲೂಕು ಪಂಚಾಯಿತಿ ಅಧಿಕಾರಿಗಳು ಹಾಗೂ ತಾಲೂಕು ಆಡಳಿತ ಮೌನವಹಿಸಿದೆ ಎಂದು ದೂರಿದರು.
ಪ್ರತಿಭಟನಾ ಸ್ಥಳಕ್ಕೆ ತಾಪಂ ಕಾರ್ಯಾಲಯದ ವ್ಯವಸ್ಥಾಪಕ ಪ್ರಸನ್ನ ಆಗಮಿಸಿ ಪ್ರತಿಭಟನಾಕಾರರ ಮನವಿ ಆಲಿಸಿದ್ದು, ಬುಧವಾರದೊಳಗೆ ಸಂಬಂಧಪಟ್ಟ ಭೂಮಿ ದಾಖಲೆ ಪರಿಶೀಲಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂಪಡೆಯಲಾಯಿತು.
ಮುಖಂಡರಾದ ಬಿ.ಸಿ.ಕೃಷ್ಣೇಗೌಡ, ಹುಂಡುವಾಡಿ ಮಹದೇವು, ಮೇಳಾಪುರ ಜಯರಾಮು, ಶಿವರಾಜು, ರವಿಲಕ್ಷ್ಮಣ ,ಪರಮೇಶ್, ಚೆಲುವೇಗೌಡ, ಸಿದ್ದೇಗೌಡ, ಕೆಂಪಣ್ಣ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.