ಚಿತ್ರದುರ್ಗ: ಬಿಜೆಪಿ ಅಧಿಕಾರಾವಧಿಯಲ್ಲಿ ಜಾರಿಯಾಗಿದ್ದ ಯೋಜನೆಗಳನ್ನು ತಡೆಯುವ ದುಷ್ಟತನವನ್ನು ಕಾಂಗ್ರೆಸ್ ಪ್ರದರ್ಶಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿ ಕಾರಿದರು.
ತಿರುಮಲ ಕಲ್ಯಾಣ ಮಂಟಪದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಿಜೆಪಿ ಸದಸ್ಯತ್ವ ಅಭಿಯಾನ ಪರಿಶೀಲನೆ ಸಭೆಗೆ ಚಾಲನೆ ನೀಡಿ ಮಾತನಾಡಿದರು.
ಸಿದ್ದರಾಮಯ್ಯ ಅಧಿಕಾರಕ್ಕೆ ಬಂದು 2 ವರ್ಷ ಆಗುತ್ತಿದ್ದರೂ ಅಭಿವೃದ್ಧಿಗೆ ಚಾಲನೆ ಸಿಕ್ಕಿಲ್ಲ. ಬಿಜೆಪಿ ಸರ್ಕಾರ ಜಾರಿಗೊಳಿಸಿದ್ದ ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳನ್ನು ಈ ಸರ್ಕಾರ ತಡೆ ಹಿಡಿದಿದೆ ಎಂದು ಆಪಾದಿಸಿದರು.
ಬಿ.ಎಸ್.ಯಡಿಯೂರಪ್ಪ ಅವರು ಕೂಡಲ ಸಂಘಮ ಅಭಿವೃದ್ಧಿಗೆ 600 ಕೋಟಿ ರೂ. ನೀಡಿದ್ದರು. ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳಿಗೆ ಬೊಮ್ಮಾಯಿ 12,500 ಕೋಟಿ ರೂ. ಮಂಜೂರು ಮಾಡಿದ್ದರು. ಇವುಗಳ ಅನುದಾನಕ್ಕೆ ಕಾಂಗ್ರೆಸ್ ಕೊಕ್ಕೆ ಹಾಕಿದೆ ಎಂದು ಟೀಕಿಸಿದರು.
ಕಲ್ಯಾಣ ಕರ್ನಾಟಕಕ್ಕೆ 11500 ಕೋಟಿ ರೂ. ಮೀಸಲಿಡುವ ಕಾಂಗ್ರೆಸ್ ಹೇಳಿಕೆ ಘೋಷಣೆಗೆ ಮಾತ್ರ ಸೀಮಿತವಾಗಲಿದೆ. ಈ ಸರ್ಕಾರ ಜನರ ಕಿವಿಗೆ ಹೂವು ಇಡಲು ಹೊರಟಿದೆ ಎಂದು ಲೇವಡಿ ಮಾಡಿದರು.
ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರು ಮೈಸೂರು, ಬೆಂಗಳೂರಿಗೆ ಸೀಮಿತವಾಗಿದ್ದಾರೆ. ಬರ, ನೆರೆ ಬಂದರೂ ಪ್ರವಾಸ ಮಾಡಲಿಲ್ಲ. ರೈತರು, ಹಿಂದುಳಿದವರು, ದಲಿತರ ಬಗ್ಗೆ ಕಾಳಜಿ ಇಲ್ಲ ಎಂದು ಟೀಕಿಸಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮ ಹಾಗೂ ಮುಡಾ ಹಗರಣ, ಎಸ್‌ಸಿಎಸ್‌ಪಿ, ಟಿಎಸ್‌ಪಿ ಅನುದಾನ ದುರ್ಬಳಕೆ ವಿರೋಧಿಸಿ ಬಿಜೆಪಿ ಕೈಗೊಂಡಿದ್ದ ಪಾದಯಾತ್ರೆ ಕಾಂಗ್ರೆಸ್ ವಿರುದ್ಧ ಜನಾಂದೋಲನ ರೂಪಿಸಲು ಯಶಸ್ವಿಯಾಗಿದೆ ಎಂದರು.
ಪಾದಯಾತ್ರೆಯಿಂದ ಸಿದ್ದರಾಮಯ್ಯ ಒಂಟಿಕಾಲಲ್ಲಿ ನಿಲ್ಲುವಂತಾಗಿದೆ. ಯಾವುದೇ ಗಳಿಗೆಯಲ್ಲಿ ರಾಜೀನಾಮೆ ಕೊಡಬಹುದು. ಕುರ್ಚಿ ಕಚ್ಚಾಟ ತಾರಕಕ್ಕೇರಿ ಸರ್ಕಾರ ಬಿದ್ದರೆ ಅಚ್ಚರಿ ಇಲ್ಲ ಎಂದು ಹೇಳಿದರು.
ಬ್ರಹ್ಮಾಂಡ ಭ್ರಷ್ಟಾಚಾರದಿಂದ ರಾಜ್ಯದ ಆಡಳಿತ ಯಂತ್ರ ಕುಸಿದಿದೆ. ಮಾಜಿ ಸಚಿವ ದೇಶಪಾಂಡೆ ಅನುದಾನವಿಲ್ಲದೆ ಕ್ಷೇತ್ರದಲ್ಲಿ ಓಡಾಡಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ. ತಪ್ಪು ಮುಚ್ಚಿಕೊಳ್ಳಲು ಕೈ ನಾಯಕರು ರಾಜ್ಯಪಾಲರ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಟೀಕಿಸಿದರು.
ಶಾಸಕ ಡಾ.ಎಂ.ಚಂದ್ರಪ್ಪ, ವಿಧಾನ ಪರಿಷತ್ ಸದಸ್ಯರಾದ ಎನ್.ರವಿಕುಮಾರ್, ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ಹನುಮಂತೇಗೌಡ, ಖನಿಜ ನಿಗಮದ ಮಾಜಿ ಅಧ್ಯಕ್ಷ ಎಸ್.ಲಿಂಗಮೂರ್ತಿ, ಸುರೇಶ್ ಸಿದ್ದಾಪುರ, ಸೌಭಾಗ್ಯಾ ಬಸವರಾಜನ್, ಕೆ.ಟಿ.ಕುಮಾರಸ್ವಾಮಿ, ಅನಿತ್ ಕುಮಾರ್, ತಮ್ಮೇಶ್‌ಗೌಡ, ಶರಣು ತಳ್ಳಿಕೆರೆ, ಸಂಪತ್‌ಕುಮಾರ್, ಕೆ.ಮಲ್ಲಿಕಾರ್ಜುನ್, ಜಿ.ಎಚ್.ಸುರೇಶ್ ಇದ್ದರು.
*ಕೋಟ್
ಇಪ್ಪತ್ತು ದಿನಗಳಲ್ಲಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲಿಸಿದ ಕೀರ್ತಿ ಕಾರ್ಯಕರ್ತರಿಗೆ ಸಲ್ಲುತ್ತದೆ. ನೀವಿದ್ದರೆ ನಾವು, ನೀವೇ ಪಕ್ಷದ ಆಸ್ತಿ. ಜಿಲ್ಲೆಯಲ್ಲಿ 3.50 ಲಕ್ಷ ಸದಸ್ಯತ್ವ ಗುರಿ ದಾಟಬೇಕಿದೆ. ವಿಜಯೇಂದ್ರ ರಾಜ್ಯಾದ್ಯಂತ ನಿರಂತರ ಪ್ರವಾಸ ನಡೆಸುತ್ತ ಪಕ್ಷಕ್ಕೆ ಶಕ್ತಿ ತುಂಬುತ್ತಿದ್ದಾರೆ.
ಗೋವಿಂದ ಎಂ.ಕಾರಜೋಳ, ಸಂಸದರು
*ಕೋಟ್
ಜಿಲ್ಲೆಯಲ್ಲಿ ಸದಸ್ಯತ್ವ ನೋಂದಣಿಗುರಿ ತಲುಪಲು ಕಾರ್ಯಕರ್ತರು ಶ್ರಮಿಸಬೇಕು. ಬೂತ್ ಮಟ್ಟದಿಂದ ಪ್ರಗತಿ ಮಾಹಿತಿ ಪಡೆಯಲು ಕೇಂದ್ರ ನಾಯಕರಿಗೆ ಸಾಧ್ಯವಾಗುವಂಥ ತಂತ್ರಜ್ಞಾನ ರೂಪಿತವಾಗಿದೆ.
ಕೆ.ಎಸ್.ನವೀನ್, ವಿಧಾನ ಪರಿಷತ್ ಸದಸ್ಯ
ಹಾರ- ತುರಾಯಿಗಳಿಗೆ ಬ್ರೇಕ್
ಈ ಹಿಂದೆಯೇ ಸ್ಪಷ್ಟ ಬಹುಮತದಿಂದ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯವಿತ್ತಾದರೂ ಕುತಂತ್ರಗಳಿಂದ ಸಾಧ್ಯವಾಗಲಿಲ್ಲ. ಸ್ಪಷ್ಟ ಬಹುಮತದೊಂದಿಗೆ ಪಕ್ಷ ಅಧಿಕಾರಕ್ಕೆ ಬರುವವರೆಗೂ ಒಂದು ದಿನವೂ ವಿರಮಿಸುವುದಿಲ್ಲವೆಂದು ಸಂಕಲ್ಪ ಮಾಡಿದ್ದೇನೆ. ಅಲ್ಲಿಯವರೆಗೆ ಹೂ ಹಾರ ಸ್ವೀಕರಿಸುವುದಿಲ್ಲ ಎಂದು ವಿಜಯೇಂದ್ರ ತಿಳಿಸಿದರು. ಹೀಗಾಗಿ ಸಭೆಯಲ್ಲಿ ಹಾರ-ತುರಾಯಿಗಳ ಭರಾಟೆ ಇರಲಿಲ್ಲ.
*ದೇಶ ದ್ರೋಹಿಗಳಿಗೆ ಕಾಂಗ್ರೆಸ್ ಕುಮ್ಮಕ್ಕು
ಗಣೇಶ ವಿಸರ್ಜನೆ ಸಂದರ್ಭದಲ್ಲಿ ರಾಜ್ಯದ ವಿವಿಧೆಡೆ ಹಿಂದು ಕಾರ್ಯಕರ್ತರನ್ನು ಗುರಿಯಾಗಿಸಿ ನಡೆಸುತ್ತಿರುವ ದಾಳಿಗಳಿಗೆ ಕಾಂಗ್ರೆಸ್ ಕುಮ್ಮಕ್ಕಿದೆ ಎಂದು ವಿಜಯೇಂದ್ರ ದೂರಿದರು. ಹಗರಣಗಳನ್ನು ಮರೆಮಾಚಲು, ಅಲ್ಪಸಂಖ್ಯಾತರ ತುಷ್ಠೀಕರಣ ಹಾಗೂ ದೇಶದ್ರೋಹಿಗಳಿಗೆ ರತ್ನ ಕಂಬಳಿ ಹಾಸುತ್ತಿರುವ ಕಾರಣ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮೀಸಲು ತೆಗೆದುಹಾಕುವ ರಾಹುಲ್‌ಗಾಂಧಿ ಹೇಳಿಕೆ ಪ್ರಸ್ತಾಪಿಸಿ ತರಾಟೆಗೆ ತೆಗೆದುಕೊಂಡರು. ಲಡ್ಡು ವಿವಾದ ಕುರಿತು ಆಂಧ್ರಪ್ರದೇಶ ಸರ್ಕಾರ ಸಮಗ್ರ ತನಿಖೆ ಕೈಗೊಂಡು ಕ್ರಮ ವಹಿಸುವ ವಿಶ್ವಾಸವಿದೆ. ತಪ್ಪು ಕಂಡುಬಂದಲ್ಲಿ ಸಂಬಂಧಿಸಿದವರಿಗೆ ಶಿಕ್ಷೆಯಾಗಲಿ ಎಂದರು.