ಜಿಲ್ಲೆ

ಬಿಜೆಪಿ ಮುಖಂಡರ ಸಂಬಂಧಿಗಳಿಗೆ ಟಿಕೆಟ್

Nepotism in bjp: Congress releases list of candidates who got tickets due to relatives.

ಹುಬ್ಬಳ್ಳಿ : ಸ್ವಜನಪಕ್ಷಪಾತದಲ್ಲಿ ತೊಡಗಿರುವ ಬಿಜೆಪಿ, ಕರ್ನಾಟಕದ 224 ವಿಧಾನಸಭೆ ಕ್ಷೇತ್ರಗಳ ಪೈಕಿ 36 ಕ್ಷೇತ್ರಗಳ ಟಿಕೆಟ್ ಅನ್ನು ಪಕ್ಷದ ಮುಖಂಡರು, ಹಾಲಿ-ಮಾಜಿ ಶಾಸಕರು, ಸಂಸದರ ಸಂಬಂಧಿಗಳಿಗೆ ನೀಡಿದೆ ಎಂದು ಎಐಸಿಸಿ ಮಾಧ್ಯಮ ಮತ್ತು ಸಂವಹನ ಸಮಿತಿಯ ಕರ್ನಾಟಕ ಉಸ್ತುವಾರಿ ರೋಹನ್ ಗುಪ್ತಾ ಹೇಳಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಕುಟುಂಬ ರಾಜಕಾರಣ ಮಾಡುತ್ತದೆ ಎಂಬ ಆರೋಪ ಬಿಜೆಪಿ ಮಾಡುತ್ತಿರುತ್ತದೆ. ಆದರೆ, ಪ್ರಸಕ್ತ ಸಾಲಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸಹ ಕುಟುಂಬ ರಾಜಕಾರಣಕ್ಕೆ ಇಳಿದಿದೆ ಎಂದರು.

ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತರಿಗೆ ಮಹತ್ವ ಇಲ್ಲ ಎಂಬುದು ಇದರಿಂದ ಬಹಿರಂಗಗೊಂಡಂತಾಗಿದೆ. ಪಕ್ಷದ ಮುಖಂಡರು ಸಾರ್ವಜನಿಕರೊಂದಿಗೆ ಅಹಕಾಂರದಿಂದ ವರ್ತಿಸುತ್ತಿದ್ದಾರೆ. ಇದಕ್ಕೆಲ್ಲ ಮತದಾರರು ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದರು.

ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ನೀಡಿದ್ದ ಶೇ. 95ರಷ್ಟು ಭರವಸೆಗಳನ್ನು ಸಹ ಈಡೇರಿಸಿಲ್ಲ. ಈ ಸರ್ಕಾರ 40 ಪರ್ಸೆಂಟೇಜ್ ಭ್ರಷ್ಟಾಚಾರದಿಂದ ಕೂಡಿದೆ ಎಂಬುದು ಜಗ್ಗಜಾಹೀರಾಗಿದೆ ಎಂದರು.

ಬಿಜೆಪಿಯ ಈ ವರ್ತನೆಯಿಂದಾಗಿ ಆ ಪಕ್ಷಕ್ಕೆ ಚುನಾವಣೆಯಲ್ಲಿ 40ಕ್ಕಿಂತ ಕಡಿಮೆ ಸ್ಥಾನ ದೊರಕುವುದು ಖಚಿತ. ರಾಜ್ಯದಲ್ಲಿ ಕಾಂಗ್ರೆಸ್ ಪರ ವಾತಾವರಣ ಇದ್ದು, 140ಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಕಾಣಲಿದ್ದೇವೆ ಎಂದು ತಿಳಿಸಿದರು.

ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರ ಪ್ರಣಾಳಿಕೆಯಲ್ಲಿನ ಎಲ್ಲ ಭರವಸೆಗಳನ್ನು ಈಡೇರಿಸಿತ್ತು. ರಾಜಸ್ಥಾನ ಸರ್ಕಾರವೂ ಶೇ. 90ರಷ್ಟು ಆಶ್ವಾಸನೆಗಳನ್ನು ಜಾರಿಗೊಳಿಸಿದೆ. ಛತ್ತಿಸಗಡ, ಹಿಮಾಚಲ ಪ್ರದೇಶ ಸರ್ಕಾರಗಳು ಸಹ ಭರವಸೆಗಳನ್ನು ಈಡೇರಿಸುತ್ತಿವೆ. ಕರ್ನಾಟಕದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಪ್ರಣಾಳಿಕೆಯಲ್ಲಿ ನೀಡಿರುವ ಎಲ್ಲ ಭರವಸೆಗಳನ್ನು ಈಡೇರಿಸಲಾಗುವುದು ಎಂದು ಭರವಸೆ ನೀಡಿದರು.

ಕರ್ನಾಟಕದ ಅಸ್ಮಿತೆ ನಂದಿನಿ ಬ್ರಾ್ಯಂಡ್ ಅನ್ನು ನಾಶಗೊಳಿಸಲು ಬಿಜೆಪಿ ಮುಖಂಡರು ಪ್ರಯತ್ನಿಸುತ್ತಿದ್ದಾರೆ. ನಂದಿನಿ ಉತ್ಪನ್ನಗಳನ್ನು ಕನ್ನಡಿಗರ ಹೃದಯದಿಂದ ಕಿತ್ತೊಗೆಯುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

ಮಾಜಿ ಸಂಸದ ಐ.ಜಿ. ಸನದಿ, ಧಾರವಾಡ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಅನಿಲಕುಮಾರ ಪಾಟೀಲ, ಹು-ಧಾ ಸೆಂಟ್ರಲ್ ಕ್ಷೇತ್ರದ ಕಾಂಗ್ರೆಸ್ ಚುನಾವಣೆ ಉಸ್ತುವಾರಿ ರಜತ ಉಳ್ಳಾಗಡ್ಡಿಮಠ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.