ಜಿಲ್ಲೆ

ಬಿಜೆಪಿ ಮಾಡಿರುವ ಸಾಲವನ್ನು ನಾವು ತೀರಿಸುತ್ತಿದ್ದೇವೆ:ಶಾಸಕ ಕೆಎಂಶಿ ತಿರುಗೇಟು

ಹಾಸನ: ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಬಾಕಿ ಕಾಮಗಾರಿಗಳು, ಸಾಲ ಮತ್ತು ಬಾಕಿ ಬಿಲ್‌ಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಲಿ. ಆಗ ಅವರ ಹಣೆಬರಹ ತಿಳಿಯಲಿದೆ ಎಂದು ಬಿಜೆಪಿ ನಾಯಕರ ವಿರುದ್ಧ ಶಾಸಕ ಕೆ.ಎಂ.ಶಿವಲಿಂಗೇಗೌಡ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನಾಯಕರು ರಾಜ್ಯ ಸರ್ಕಾರ ಟೇಕ್ ಆಫ್ ಆಗಿಲ್ಲ. ಹೊಸ ಅಭಿವೃದ್ಧಿ ಕಾಮಗಾರಿಗಳನ್ನು ಮಾಡುತ್ತಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ಬಿಜೆಪಿಯವರು ಅಧಿಕಾರದಲ್ಲಿ ಇದ್ದ ಸಂದರ್ಭದಲ್ಲಿ ಎಷ್ಟು ಸಾಲ ಉಳಿಸಿ ಹೋಗಿದ್ದರು. ಅದನ್ನು ಈಗ ನಮ್ಮ ಸರ್ಕಾರ ತೀರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿಯವರಿಗೆ ಆತ್ಮಸಾಕ್ಷಿ ಇದ್ದರೆ ಶ್ವೇತಪತ್ರ ಹೊರಡಿಸಲಿ. ಲೋಕಪಯೋಗಿ ಇಲಾಖೆಯಲ್ಲಿ 7000 ಕೋಟಿ ರೂ. ಹಾಗೂ ಜಲ ಸಂಪನ್ಮೂಲ ಇಲಾಖೆಯಲ್ಲಿ 1.22 ಲಕ್ಷ ಕೋಟಿ ರೂ. ಉಳಿಸಿ ಹೋಗಿದ್ದರು. ಇದನ್ನು ಪ್ರತಿ ತಿಂಗಳು ನಾವು ತೀರಿಸುತ್ತಿದ್ದೇವೆ. ಗುತ್ತಿಗೆದಾರರಿಗೆ ಬಾಕಿ ಹಣ ಕೊಟ್ಟಿಲ್ಲ ಎಂದರೆ ಮತ್ತೆ ಪ್ರತಿಭಟನೆ ಮಾಡುತ್ತಾರೆ ಎಂದು ಹೇಳಿದರು.
ಕೇಂದ್ರ ಸರ್ಕಾರದ ಹೌಸಿಂಗ್ ಫಾರ್ ಹಾಲ್ ಎಂಬ ಯೋಜನೆ ರಾಜ್ಯದಲ್ಲಿ ಸಂಕಷ್ಟದಲ್ಲಿದೆ. ಅದೇ ರೀತಿ ಅರಸೀಕೆರೆಯಲ್ಲಿ 68 ಕೋಟಿ ರೂ. ವೆಚ್ಚದಲ್ಲಿ 1300 ಮನೆಗಳನ್ನು ನಿರ್ಮಾಣ ಮಾಡಲು ಮುಂದಾಗಿದ್ದೇವೆ. ಈಗಾಗಲೇ ಒಂದು ಸಾವಿರ ಮನೆಗಳು ಮೇಲ್ಛಾವಣಿ ಹಂತದಲ್ಲಿದ್ದು, ಇನ್ನು 300 ಮನೆಗಳು ಮುಕ್ತಾಯದ ಹಂತದಲ್ಲಿವೆ. ಆದರೆ ಫಲಾನುಭವಿಗಳು ಹಣ ಕಟ್ಟಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಕೇಂದ್ರ ಸರ್ಕಾರ ಮಾಲೀಕರ ಭಾಗದ ಹಣವನ್ನು ಕಟ್ಟಿ ಯೋಜನೆಯನ್ನು ಪೂರ್ಣಗೊಳಿಸಬೇಕು ಎಂದು ಶಿವಲಿಂಗೇಗೌಡರು ಒತ್ತಾಯಿಸಿದರು.
ಕಾಮಗಾರಿಗಳಿಗೆ ಎನ್‌ಒಸಿ ತರಲು ಶೇ.10ರಷ್ಟು ಕಮಿಷನ್ ಕೊಟ್ಟು ತರಬೇಕು ಎಂಬ ಆರೋಪಕ್ಕೆ ಶಿವಲಿಂಗೇಗೌಡರು, ಈ ರೀತಿ ಸುಳ್ಳು ಕಥೆಗಳನ್ನು ಹೇಳಿಕೊಂಡು ತಿರುಗಾಡುವುದು ವಿರೋಧ ಪಕ್ಷದವರಿಗೆ ಚಾಳಿ ಆಗಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಯಾರಾದರೂ ಹಣ ನೀಡಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ ಅಥವಾ ಅದನ್ನು ಸಾಬೀತು ಪಡಿಸಲಿ. ಹಿರಿತನದ ಆಧಾರದ ಮೇಲೆ ಎನ್‌ಒಸಿಗಳನ್ನು ನೀಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್ 20ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ:
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಹೊಂದಾಣಿಕೆಯಿಂದ ಕಾಂಗ್ರೆಸ್‌ಗೆ ಅನುಕೂಲವಾಗಲಿದೆ. ಜಾತ್ಯತೀತ ಮತಗಳು ನಮ್ಮ ಪಕ್ಷಕ್ಕೆ ಬರುವುದರಿಂದ ನಾವು 20ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ ಎಂದು ಶಿವಲಿಂಗೇಗೌಡ ಅವರು ವಿಶ್ವಾಸ ವ್ಯಕ್ತಪಡಿಸಿದರು.
ಗ್ಯಾರೆಂಟಿ ಯೋಜನೆಗಳನ್ನು ಯಾರು ಪ್ರಶ್ನೆ ಮಾಡುವಂತಿಲ್ಲ. ಅದು ರಾಜ್ಯದಲ್ಲಿ ಈಗಾಗಲೇ ಅನುಷ್ಠಾನಗೊಂಡು ಎಲ್ಲರಿಗೂ ಅನುಕೂಲವಾಗುತ್ತಿದೆ. ಅಲ್ಲದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ನಾಯಕತ್ವದಲ್ಲಿ ನಮ್ಮ ಪಕ್ಷ ಸದೃಢವಾಗಿದೆ. ಅವರ ಹೊಂದಾಣಿಕೆಯಿಂದ ನಮ್ಮ ಪಕ್ಷಕ್ಕೆ ಆಶಾದಾಯಕ ಬೆಳವಣಿಗೆಯಾಗಲಿದೆ ಎಂದರು.

ಆರೋಪ ಸಾಬೀತುಪಡಿಸಲಿ:
ಸಿದ್ದರಾಮಯ್ಯ ಮಗ ಯತೀಂದ್ರ ಅವರು ವರ್ಗಾವಣೆ ದಂಧೆಯಲ್ಲಿ ತೊಡಗಿದ್ದಾರೆ ಎಂಬ ಆರೋಪವನ್ನು ಯಾರು ಮಾಡುತ್ತಿದ್ದಾರೆ ಅವರು ಅದನ್ನು ಸಾಬೀತುಪಡಿಸಲಿ ಎಂದು ಪರೋಕ್ಷವಾಗಿ ಎಚ್‌ಡಿಕೆಗೆ ಸವಾಲು ಹಾಕಿದರು.
ಆರೋಪ ಮಾಡುತ್ತಿರುವವರು ಈ ಹಿಂದೆಯೂ ಕೂಡ ಹಿಟ್ ಆ್ಯಂಡ್ ರನ್ ಕೇಸ್ ರೀತಿ ಹೇಳಿಕೆ ನೀಡಿದರು. ಪೆನ್ ಡ್ರೈವ್ ಇದೆ ಬಿಡುತ್ತಾನೆ ಎಂದು ಹೇಳಿ ವರ್ಷವಾಯಿತು. ಅದನ್ನ ಏಕೆ ಬಿಡಲಿಲ್ಲ. ಈಗಲೂ ಕೂಡ ಅದೇ ರೀತಿ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರು ಆರೋಪ ಸಾಬೀತಾದರೆ ನಾನು ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ ಎಂದು ಹೇಳಿದ್ದಾರೆ. ಅವರು ಆರೋಪ ಸಾಬೀತು ಪಡಿಸಲಿ ಎಂದು ಒತ್ತಾಯಿಸಿದರು
ಮುಖ್ಯಮಂತ್ರಿಗಳ ಮಗ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಮಾತನಾಡಿದ್ದಾರೆ. ಅದರಲ್ಲಿ ತಪ್ಪೇನಿದೆ. ಅವರು ವರ್ಗಾವಣೆ ಮಾಡಿ ಎಂದು ಎಲ್ಲಾದರೂ ಹೇಳಿದ್ದಾರೆಯೇ? ಒಂದು ವೇಳೆ ವರ್ಗಾವಣೆ ಮಾಡಿ ಎಂದು ಹೇಳಿದ್ದರೂ ಅದರಲ್ಲಿ ತಪ್ಪೇನಿದೆ. ಹಿಂದಿನ ಮುಖ್ಯಮಂತ್ರಿಗಳ ಮಕ್ಕಳು ಯಾರು ವರ್ಗಾವಣೆ ಮಾಡಿಸಿಲ್ಲವೆ? ಯಾರಿಗೆ ಈ ರೀತಿ ಅಭ್ಯಾಸ ಇರುತ್ತದೆ ಅವರು ಮಾತನಾಡುತ್ತಾರೆ ಎಂದು ಟಾಂಗ್ ನೀಡಿದರು.
ವಿದ್ಯುತ್ ಕಳ್ಳತನದ ಬಗ್ಗೆ ಪ್ರತಿಕ್ರಿಯಿಸಲ್ಲ. ನಾನು ದೊಡ್ಡವರ ಬಗ್ಗೆ ಮಾತನಾಡುವುದಿಲ್ಲ. ಮಾತನಾಡಿದರೆ ನನ್ನ ಬಾಲ್ಯ ಹಾಗೂ ನಿಕ್ಕರ್ ಹಾಕಿಕೊಂಡು ಕೆಲಸ ಮಾಡುತ್ತಿದ್ದ ಸಮಯದಿಂದ ತೆಗೆದು ಮಾತನಾಡುತ್ತಾರೆ. ಅಂತಹವರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಎಚ್‌ಡಿಕೆ ವಿರುದ್ಧ ಲೇವಡಿ ಮಾಡಿದರು.