ಜಿಲ್ಲೆ

ಬಿಜೆಪಿ ಮಡಿಲಿಗೆ ಬೀದರ್ ಜಿಪಂ

Bidar

ಬೀದರ್: ಕಾಂಗ್ರೆಸ್ ನಿಂದ ಕೈಜಾರಿದ ಬೀದರ್ ಜಿಪಂ ಸಾರಥ್ಯ ನಿರೀಕ್ಷೆಯಂತೆ ಬಿಜೆಪಿಗೆ ಒಲಿದಿದೆ. ಆಂತರಿಕ ಜಗಳ, ಸ್ವಪ್ರತಿಷ್ಠೆ, ಆಡಳಿತರೂಢರ ಬಂಡಾಯದಿಂದ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದ್ದು, ಬಾಕಿ ಉಳಿದ ಮೂರ್ನಾಲ್ಕು ತಿಂಗಳ ಅಲ್ಪ ಅವಧಿಯ ಆಡಳಿತ ಭಾಗ್ಯ ಬಿಜೆಪಿಗೆ ಸಿಕ್ಕಿದೆ.

ಅಧ್ಯಕ್ಷೆಯಾಗಿ ಮಂಠಾಳ ಕ್ಷೇತ್ರದ ಬಿಜೆಪಿ ಸದಸ್ಯೆ ನಿರ್ಮಲಾ ಮಾನೆಗೋಪಾಲ, ಉಪಾಧ್ಯಕ್ಷರಾಗಿ ಮಾಳೆಗಾಂವ್ ಕ್ಷೇತ್ರದ ಕಾಂಗ್ರೆಸ್ ಉಚ್ಚಾಟಿತ (ಬಿಜೆಪಿ ಬೆಂಬಲಿತ) ಸದಸ್ಯ ವಿಜಯಕುಮಾರ ಪಾಟೀಲ್ ಗಾದಗಿ ಆಯ್ಕೆಯಾಗಿದ್ದಾರೆ. ಹೊಸಬರ ಆಯ್ಕೆಗಾಗಿ ಕಳೆದ ದಿ. 14ರಂದೇ ನಡೆದಿತ್ತು. ಆದರೆ ಹೈಕೋಟ್೯ ನಿರ್ದೇಶನದ ಪ್ರಕಾರ ಅಧಿಕೃತ ಆಯ್ಕೆ ಘೋಷಣೆ ಮಾಡಲಿಲ್ಲ. ಚುನಾವಣೆ ಫಲಿತಾಂಶವು ಮುಚ್ಚಿದ ಲಕೋಟೆಯಲ್ಲಿ ಕೋಟ್೯ಗೆ ಸಲ್ಲಿಸಲಾಗಿತ್ತು. ಈಗ ಕೋಟ್೯ ತಕರಾರು ಬಗೆಹರಿದ ಕಾರಣ ಚುನಾವಣಾಧಿಕಾರಿಯಾಗಿದ್ದ ಕಲಬುರಗಿ ಪ್ರಾದೇಶಿಕ ಆಯುಕ್ತ ಡಾ. ಎನ್.ಪ್ರಸಾದ ಅವರು ಮಂಗಳವಾರ ಫಲಿತಾಂಶ ಪ್ರಕಟಿಸಿದ್ದಾರೆ.

ಕೋಟ್೯ನಲ್ಲಿ ಸಲ್ಲಿಸಿದ್ದ ತಕಾರರು ಅರ್ಜಿ ಇತ್ಯರ್ಥವಾದ ಹಿನ್ನೆಲೆಯಲ್ಲಿ ಡಿ.14ರ ಚುನಾವಣೆ ಫಲಿತಾಂಶ ಘೋಷಿಸಲಾಗಿದೆ. ಜಿಪಂ ಒಟ್ಟು 34 ಸದಸ್ಯ ಬಲ ಹೊಂದಿದೆ. ಈ ಪೈಕಿ ಒಬ್ಬರು ಮೃತಪಟ್ಟ ಕಾರಣ ಸಂಖ್ಯೆ 33ಕ್ಕಿಳಿದಿದೆ. ಅಂದಿನ ಸಭೆಯಲ್ಲಿ 24 ಸದಸ್ಯರು ಇದ್ದರು. ಅಧ್ಯಕ್ಷ ಸ್ಥಾನಕ್ಕೆ ನಿರ್ಮಲಾ, ಉಪಾಧ್ಯಕ್ಷ ಸ್ಥಾನಕ್ಕೆ ವಿಜಯಕುಮಾರ ಮಾತ್ರ ನಾಮಪತ್ರ ಸಲ್ಲಿಸಿರುವ ಕಾರಣ, ಇಬ್ಬರ ಅವಿರೋಧ ಆಯ್ಕೆ ನಡೆದಿದೆ. ಅಧ್ಯಕ್ಷ ಸ್ಥಾನ ಎಸ್ಟಿ ಮಹಿಳೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು ಎಂದು ಡಾ. ಪ್ರಸಾದ ಅವರು ಆದೇಶದಲ್ಲಿ ತಿಳಿಸಿದ್ದಾರೆ. ಇದರೊಂದಿಗೆ ಜಿಪಂನಲ್ಲಿ ಕಳೆದೆರಡು ತಿಂಗಳಿಂದ ಸೃಷ್ಟಿಯಾಗಿದ್ದ ಅತಂತ್ರ ಸ್ಥಿತಿ ಕೊನೆಗೊಂಡಿದೆ.

ಹಿಂದಿನ ಅಧ್ಯಕ್ಷೆ ಗೀತಾ ಚಿದ್ರಿ, ಉಪಾಧ್ಯಕ್ಷ ಲಕ್ಷ್ಮಣರಾವ ಬುಳ್ಳಾ (ಇಬ್ಬರೂ ಕಾಂಗ್ರೆಸ್) ವಿರುದ್ಧ ಅವಿಶ್ವಾಸ ನಿರ್ಣಯ ಅಂಗೀಕಾರ ಆಗಿದ್ದ ಹಿನ್ನೆಲೆಯಲ್ಲಿ ತೆರವಾದ ಸ್ಥಾನಗಳಿಗೆ ಡಿ.14ರಂದು ಚುನಾವಣೆ ನಡೆಸಲಾಗಿತ್ತು. ಬಿಜೆಪಿಯ 11, ಜೆಡಿ ಎಸ್ 2 ಹಾಗೂ ಕಾಂಗ್ರೆಸ್ ಉಚ್ಚಾಟಿತ 11 ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು. ಇವರಲ್ಲಿ ಬಿಜೆಪಿಯ ಸುಧೀರ ಕಾಡಾದಿ, ನಿರ್ಮಲಾ ಮಾನೆಗೋಪಾಲ, ಅಣ್ಣಾರಾವ ರಾಠೋಡ್, ಅಮರಪಾಲಿ ವೀರಣ್ಣಾ, ಗುಂಡುರೆಡ್ಡಿ, ಮೀನಾ ಚವ್ಹಾಣ್, ತಾರಾಬಾಯಿ ರಾಠೋಡ್, ಶಕುಂತಲಾ ಬೆಲ್ದಾಳೆ, ಸುರೇಖಾ ಭೋಸ್ಲೆ, ಮಾರುತಿ ಚವ್ಹಾಣ್, ಸುನೀತಾ ತುಕಾರಾಮ, ಜೆಡಿಎಸ್ನ ಆನಂದ ಪಾಟೀಲ್, ಸುನೀತಾ ಸಂತೋಷ ಹಾಗೂ ಕಾಂಗ್ರೆಸ್ ಉಚ್ಚಾಟಿತರಾದ ವಿಜಯಕುಮಾರ ಪಾಟೀಲ್ ಗಾದಗಿ, ಮಂಜುಳಾ ಸ್ವಾಮಿ, ಅಫ್ರೋಜ್ ಖಾನ್, ಜಯಶ್ರೀ ರಾಠೋಡ್, ಉಷಾ ನಿಟ್ಟೂರಕರ್, ಬಾಬುಸಿಂಗ್ ಹಜಾರಿ, ರಾಜಶೇಖರ ಮೇತ್ರೆ, ರವೀಂದ್ರ ರೆಡ್ಡಿ, ಪ್ರಿಯಾ ಠಾಕೂರ್, ಡಾ. ಪ್ರಕಾಶ ಪಾಟೀಲ್, ಭಾರತಬಾಯಿ ಶೇರಿಕಾರ ಸೇರಿದ್ದರು.