ಜಿಲ್ಲೆ

ಬಿಜೆಪಿ ಮಡಿಲಿಗೆ ತೀರ್ಥಹಳ್ಳಿ ಎಪಿಎಂಸಿ

ತೀರ್ಥಹಳ್ಳಿ: ತೀರ್ಥಹಳ್ಳಿ ಎಪಿಎಂಸಿ ಬಿಜೆಪಿ ವಶವಾಗಿದ್ದು ಮುಂದಿನ 20 ತಿಂಗಳ ಅವಧಿಗೆ ನೂತನ ಅಧ್ಯಕ್ಷರಾಗಿ ತಾಪಂ ಸದಸ್ಯ ಸಾಲೇಕೊಪ್ಪ ರಾಮಚಂದ್ರ, ಕಾಂಗ್ರೆಸ್​ನಿಂದ ಕಡೇ ಗಳಿಗೆಯಲ್ಲಿ ಸಿಡಿದು ಬಿಜೆಪಿ ಸೇರಿದ ಬಿ.ಎಸ್.ಯಲ್ಲಪ್ಪ ಉಪಾಧ್ಯಕ್ಷರಾಗಿ ಆಯ್ಕೆಯಾದರು.

17 ಸದಸ್ಯ ಬಲದ ಈ ಎಪಿಎಂಸಿಯಲ್ಲಿ 8 ಸದಸ್ಯರನ್ನು ಹೊಂದಿದ್ದ ಬಿಜೆಪಿ, ಕಾಂಗ್ರೆಸ್​ನ ಯಲ್ಲಪ್ಪ ಅರನ್ನು ಪಕ್ಷಕ್ಕೆ ಸೆಳೆದುಕೊಳ್ಳುವ ಮೂಲಕ 10-7 ಮತಗಳ ಅಂತರದಲ್ಲಿ ಜಯ ಗಳಿಸುವಲ್ಲಿ ಯಶಸ್ವಿಯಾಗಿದೆ. ಪಕ್ಷೇತರ ಸದಸ್ಯೆ ಸರಳಾ ಲೋಕೇಶ್ ಕೂಡ ಬಿಜೆಪಿ ಪರವಾಗಿ ಮತ ನೀಡಿದರು.

ಕಾಂಗ್ರೆಸ್​ನಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ಹೆಬ್ಬುಲಿಗೆ ಉಮೇಶ್ ಹಾಗೂ ಉಪಾಧ್ಯಕ್ಷ ಸ್ಥಾನದ ಉಷಾ ಭಾಸ್ಕರ್ ತಲಾ 7 ಮತ ಗಳಿಸಿ ಪರಾಭವಗೊಂಡರು. ತಹಸೀಲ್ದಾರ್ ಡಾ. ಶ್ರೀಪಾದ್ ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

ನೂತನ ಅಧ್ಯಕ್ಷ ಸಾಲೆಕೊಪ್ಪ ರಾಮಚಂದ್ರ ಎಲ್ಲರ ಸಹಕಾರ ಕೋರಿದರೆ, ನಿರ್ಗಮಿತ ಅಧ್ಯಕ್ಷ ಹಸಿರುಮನೆ ಮಹಾಬಲೇಶ್, ಎಲ್ಲರೂ ಕೂಡಿ ಉತ್ತಮ ಕೆಲಸ ಮಾಡೋಣ ಎಂದರು. ಜಿಪಂ ಸದಸ್ಯರಾದ ಕಾಸರವಳ್ಳಿ ಶ್ರೀನಿವಾಸ್ ಮತ್ತು ಅಪೂರ್ವ ಶರಧಿ, ಪಪಂ ಸಿಒ ನಾಗೇಂದ್ರಕುಮಾರ್, ತಾಲೂಕು ಬಿಜೆಪಿ ಅಧ್ಯಕ್ಷ ರಾಘವೇಂದ್ರ ನಾಯಕ್, ಎಪಿಎಂಸಿ ನಿರ್ದೇಶಕರಾದ ಕೆ.ನಾಗರಾಜ್ ಶೆಟ್ಟಿ, ಸಿ.ಬಿ.ಈಶ್ವರ್, ಕೇಳೂರು ಮಿತ್ರಾ, ಹುಂಚದಕಟ್ಟೆ ವೆಂಕಟೇಶ್, ಪ್ರಕಾಶ್ ಇತರರಿದ್ದರು.

ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ತಂತ್ರಗಾರಿಕೆ ಅನಿವಾರ್ಯ. ಇದರಿಂದ ಪರಾಭವಗೊಂಡವರು ಬೇಸರಿಸಬಾರದು. ಜನಸೇವೆಯೇ ಅಂತಿಮ ಗುರಿಯಾಗಿರುವ ಕಾರಣ ಸೋತವರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ಜನರಿಗೆ ತೃಪ್ತಿಯಾಗುವಂತೆ ಕಾರ್ಯನಿರ್ವಹಿಸಬೇಕು. ಈ ಸಂಸ್ಥೆಯನ್ನು ರೈತರು ಗುರುತಿಸುವಂತಾಗಬೇಕು.

| ಆರಗ ಜ್ಞಾನೇಂದ್ರ, ಶಾಸಕ