ಚಿತ್ರದುರ್ಗ: ಅಯೋಧ್ಯೆ ಶ್ರೀರಾಮಮಂದಿರದ ಉದ್ಘಾಟನೆ ಹೆಸರಲ್ಲಿ, ಮನೆ,ಮನೆಗೆ ಮಂತ್ರಾಕ್ಷತೆ ವಿತರಿಸುವ ನಾಟಕವನ್ನು ಮೊದಲು ಬಿಜೆಪಿ ಬಂದ್ ಮಾಡಲಿ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂತ್ರಾಕ್ಷತೆ ಹಿಡಿದು ಹೊರಟಿರುವ ಬಿಜೆಪಿ,ಹಸಿದ ಹೊಟ್ಟೆಗೆ ಅನ್ನ, ಸೂರಿಲ್ಲದವರಿಗೆ ಸೂರು ಕೊಡುವ ಕೆಲಸ ಮಾಡಲಿ. ಅನ್ನಭಾಗ್ಯಕ್ಕೆ ಅಕ್ಕಿಕೊಡದೆ ಮಂತ್ರಾಕ್ಷತೆ ಕೊಡುತ್ತಿದ್ದಾರೆ. ಚುನಾವಣೆ ಬಂದಾಗ ಬಿಜೆಪಿಗೆ ಧರ್ಮ,ಪಾಕಿಸ್ತಾನ,ಮಂದಿರ, ಮಸೀದಿ ನೆನಪಾಗುತ್ತದೆ.
ಪ್ರಧಾನಿ ನರೇಂದ್ರ ಮೋದಿ ಅವರು ದೇವಾಲಯ ಸ್ವಚ್ಛತೆಯ ಕೆಲಸಕ್ಕಿಂತ ನಿರುದ್ಯೋಗ ಬಗೆಹರಿಸುವ ಕೆಲಸ ಮಾಡಲಿ. ಕಾಂಗ್ರೆಸ್ಸಿಗರು ಕಳ್ಳರು, ಜೈಲಿಗೆ ಹೋಗುತ್ತಾರೆಂಬ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿಕೆ ವಿರುದ್ಧ ಕಿಡಿಕಾರಿದ ಸಚಿವರು, ತಮ್ಮ ತಟ್ಟೆಯಲ್ಲಿ ಕತ್ತೆ ಬಿದ್ದಿದ್ದರೂ, ಬೇ ರೊಬ್ಬರ ತಟ್ಟೆಯಲ್ಲಿ ನೊಣ ಹುಡುಕುತ್ತಿದ್ದಾರೆಂದು ವ್ಯಂಗ್ಯವಾಡಿದರು.
ಸಂಸದ ಅನಂತಕುಮಾರ್‌ಹೆಗಡೆ, ನಾಲ್ಕು ವರ್ಷ ಯಾವ ಮೂಲೆಯಲ್ಲಿದ್ದ? ದೇಶ,ಮಸೀದಿ, ಮಂದಿರ ಹಾಗೂ ಸಿಎಂ ಬಗ್ಗೆ ಮಾತಾಡಿದರೆ ದೊಡ್ಡವರಾಗಲು ಸಾಧ್ಯವಿಲ್ಲ. ಮಸೀದಿ,ಹಿಂದೆ ದೇವಸ್ಥಾನವಾಗಿತ್ತು ಎಂದು ಹೇಳುವುದೇ ಕೆಲಸವೇ? ಸಿಎಂ ಸಿದ್ದರಾಮಯ್ಯ,ಡಿಸಿಎಂ ಡಿ. ಕೆ. ಶಿವಕುಮಾರ್ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಬಗ್ಗೆ ಮಾತನಾಡುವಾಗ ಎಚ್ಚರವಿರಲಿ ಎಂದು ಅನಂತಕುಮಾರ್ ಹೆಗಡೆ ಅವರಿಗೆ ವಾರ್ನಿಂಗ್ ನೀಡಿದರು.
ಕಾಂತರಾಜ್‌ಆಯೋಗ ವರದಿ ಜಾತಿ ಗಣತಿ ಅಲ್ಲ. ಅದು ಶೈಕ್ಷಣಿಕ,ಆರ್ಥಿಕ, ಸಾಮಾಜಿಕ ಸ್ಥಿತಿಗತಿ ವರದಿ. ಮಾಜಿ ಮುಖ್ಯಮಂತ್ರಿಗಳಾದ ಎ ಚ್.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರಿಗೆ ಹಿಂದುಳಿದವರ ಕಾಳಜಿ ಇಲ್ಲ. ಬರೀ ನಾಟಕ ಮಾಡುತ್ತಾರೆ, ಕಾಳಜಿ ಇದಿದ್ದರೆ ಈ ಹೊತ್ತಿಗೆ ವರದಿ ಸ್ವೀಕಾರವಾಗ ಬೇಕಿತ್ತು.
ಸಿದ್ದರಾರಾಮಯ್ಯ ವರದಿ ಸ್ವೀಕರಿಸುವುದಾಗಿ ಹೇಳಿದ್ದು,ವರದಿಯ ಕುರಿತು ಚರ್ಚೆಗಳಾಗಲಿ. ವರದಿ ಸ್ವೀಕಾರವಾಗದೆ ಅವೈಜ್ಞಾನಿಕವೆಂದು ಹೇಗೆ ಹೇಳುತ್ತಾರೆ? ಸದಾಶಿವ ಆಯೋಗ ವರದಿ ಸಂಪುಟ ಸಭೆಗೆ ಬಂದಾಗ ಮಾತಾಡುವೆ. ಹಾನಗಲ್‌ಗ್ಯಾಂಗ್‌ರೇಪ್ ಪ್ರಕರಣದ ಆರೋಪಿಗಳ ರಕ್ಷಣೆ ಪ್ರಶ್ನೆಯೇ ಇಲ್ಲ ಎಂದರು.