ಯಲ್ಲಾಪುರ: ಪಿಎಲ್ಡಿ ಬ್ಯಾಂಕ್ನ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ. 14 ಸ್ಥಾನಗಳಲ್ಲಿ 6 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾಗಿದ್ದು, 8 ಸ್ಥಾನಗಳಿಗೆ ಚುನಾವಣೆ ನಡೆಯಿತು. ಚುನಾವಣಾಧಿಕಾರಿಯಾಗಿ ತಹಸೀಲ್ದಾರ್ ಡಿ.ಜಿ. ಹೆಗಡೆ ಕಾರ್ಯನಿರ್ವಹಿಸಿದರು. ಒಟ್ಟು 235 ಮತದಾರರಲ್ಲಿ 226 ಮತದಾರರು ತಮ್ಮ ಹಕ್ಕು ಚಲಾಯಿಸಿದರು.
14 ಕ್ಷೇತ್ರಗಳ ಪೈಕಿ ಹಿತ್ಲಳ್ಳಿ-ಉಮ್ಮಚಗಿ ಸಾಮಾನ್ಯ ಕ್ಷೇತ್ರದ ಅಭ್ಯರ್ಥಿ ಡಿ.ಟಿ. ಹೆಗಡೆ ಜಾಲೀಮನೆ, ಕುಂದರಗಿ ಹಿಂದುಳಿದ ‘ಅ’ ವರ್ಗದ ಅಭ್ಯರ್ಥಿ ಈಶ್ವರ ಪಿ. ಗೌಡ ಹೆಮ್ಮಾಡಿ, ಹಾಸಣಗಿ-ಕಂಪ್ಲಿ ಹಿಂದುಳಿದ ‘ಬ’ ವರ್ಗದ ಅಭ್ಯರ್ಥಿ ಕೃಷ್ಣ ಎನ್. ಮರಾಠಿ ಬಸರೀಜಡ್ಡಿ, ಕಿರವತ್ತಿಯ ಪರಿಶಿಷ್ಟ ಪಂಗಡದ ಅಭ್ಯರ್ಥಿ ಪರಶುರಾಮ ಎಂ. ಚಲವಾದಿ, ಚಂದಗುಳಿ ಪರಿಶಿಷ್ಟ ಪಂಗಡದ ಅಭ್ಯರ್ಥಿ ರಾಮಾ ಬಿ. ಸಿದ್ದಿ ಸೋನಾರಜಡ್ಡಿ, ಯಲ್ಲಾಪುರ ಸಾಮಾನ್ಯ ವರ್ಗದ ಅಭ್ಯರ್ಥಿ ಉಮೇಶ ಎಲ್. ಬಾಬಶೇಟ್ ಅವಿರೋಧವಾಗಿ ಆಯ್ಕೆಯಾದರು.
ಇನ್ನುಳಿದ 8 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಆನಗೋಡ-ದೇಹಳ್ಳಿ ಸಾಮಾನ್ಯ ಅಭ್ಯರ್ಥಿ ರಾಮಕೃಷ್ಣ ಆರ್. ಗಾಂವ್ಕರ್, ಚಂದಗುಳಿ ಸಾಮಾನ್ಯ ಅಭ್ಯರ್ಥಿ ರಾಮಕೃಷ್ಣ ಎಸ್. ಭಟ್ಟ, ಇಡಗುಂದಿ-ಅರಬೈಲ್ ಕ್ಷೇತ್ರದ ಸಾಮಾನ್ಯ ಮಹಾಬಲೇಶ್ವರ ಜೆ. ಭಟ್ಟ, ವಜ್ರಳ್ಳಿ-ಕಳಚೆ ಕ್ಷೇತ್ರದ ಸಾಮಾನ್ಯ ನರಸಿಂಹ ಟಿ. ಭಟ್ಟ ತಾರಗಾರ, ಮಾವಿನಮನೆಯ ಸಾಮಾನ್ಯ ಕ್ಷೇತ್ರದ ಸದಾನಂದ ಎನ್. ಭಟ್ಟ, ನಂದೊಳ್ಳಿಯ ಮಹಿಳಾ ಕ್ಷೇತ್ರದ ಅಭ್ಯರ್ಥಿ ವೀಣಾ ಲಕ್ಷ್ಮೀನಾರಾಯಣ ಭಾಗ್ವತ್, ಕಣ್ಣಿಗೇರಿ ಮಹಿಳಾ ಕ್ಷೇತ್ರದ ಅಭ್ಯರ್ಥಿ ಅನಸೂಯಾ ಲಾರೆನ್ಸ್ ಸಿದ್ದಿ, ಯಲ್ಲಾಫುರ ತಾಲೂಕಿನ ಸಾಲಗಾರರಲ್ಲದ ಕ್ಷೇತ್ರದ ಸಾಮಾನ್ಯ ಅಭ್ಯರ್ಥಿ ನಾಗೇಂದ್ರ ಕೆ. ಭಟ್ಟ ನಡಿಗೆಮನೆ ಗೆಲುವು ಸಾಧಿಸಿದರು.
ಯಲ್ಲಾಪುರ ಅರ್ಬನ್ ಸೊಸೈಟಿ: ಯಲ್ಲಾಪುರ ಅರ್ಬನ್ ಕೋ- ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಸಂಘದ ಅಧ್ಯಕ್ಷ ಪರಶುರಾಮ ಆಚಾರಿ ನೇತೃತ್ವದ ಬಣ ಗೆಲುವು ಸಾಧಿಸಿದೆ. 15 ಸ್ಥಾನಗಳಲ್ಲಿ ನಾರಾಯಣ ನಾಯಕ ಮತ್ತು ಗಣಪತಿ ಸಿದ್ದಿ ಅವಿರೋಧವಾಗಿ ಆಯ್ಕೆಯಾಗಿದ್ದರು. 13 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಪರಶುರಾಮ ಆಚಾರಿ, ಜನಾರ್ದನ ಚೌಹಾಣ, ಸುಧೀರ ಕೋಡ್ಕಣಿ, ಸುರೇಶ ಅಣ್ವೇಕರ್, ನಾರಾಯಣ ಪುರಾಣಿಕ, ಪ್ರಕಾಶ ಬಡಂಗಕರ್, ಸುಬ್ರಾಯ ಭಟ್ಟ, ನರಸಿಂಹ ಸಭಾಹಿತ, ಶಿವರಾಮ ಹೆಗಡೆ, ಲಕ್ಷ್ಮಣ ಶಿಂಘ, ಪಂಚಾಕ್ಷರಿ ಹಿರೇಮಠ, ಸುಶೀಲಾ ಬಾಂದೇಕರ್, ನಂದಿನಿ ಭಟ್ಟ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಚಂದಗುಳಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ರಾಜೇಶ ಶೇಟ್ ಕಾರ್ಯನಿರ್ವಹಿಸಿದರು.
ಮುಂಡಗೋಡ ತಾಲೂಕಿನ 9 ಸೊಸೈಟಿಗಳು ಬಿಜೆಪಿ ತೆಕ್ಕೆಗೆ
ಮುಂಡಗೋಡ: ತಾಲೂಕಿನಲ್ಲಿ ಜರುಗಿದ ಸಂಘ- ಸಂಸ್ಥೆಗಳ ಚುನಾವಣೆಯಲ್ಲಿ ಎಲ್ಲ ಸೊಸೈಟಿಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲ್ಲುವ ಮೂಲಕ ಒಟ್ಟು ಒಂಬತ್ತು ಸೊಸೈಟಿಗಳು ಬಿಜೆಪಿ ತೆಕ್ಕೆಗೆ ಬಂದಿವೆ. ಈ ಮೂಲಕ ಕಾಂಗ್ರೆಸ್ಗೆ ಭಾರಿ ಮುಖಭಂಗವಾದಂತಾಗಿದೆ.
ಮುಂಡಗೋಡ ದೊಡ್ಡ ಪ್ರಮಾಣದ ವ್ಯವಸಾಯ ಸೇವಾ ಸಹಕಾರಿ ಸಂಘದ (ಎಲ್ಎಸ್ಎಂಪಿ) ಎಲ್ಲ 13 ಸ್ಥಾನಗಳೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಬೆಡಸಗಾಂವ ಸೊಸೈಟಿಯ ಎಲ್ಲ ಸ್ಥಾನ, ನಂದಿಕಟ್ಟಾ 13ರ ಪೈಕಿ 12 ಸ್ಥಾನ, ಪಿಎಲ್ಡಿ 14ರಲ್ಲಿ 12 ಸ್ಥಾನ, ಚವಡಳ್ಳಿ 13ರಲ್ಲಿ 10 ಸ್ಥಾನ, ಇಂದೂರ 13ರಲ್ಲಿ 12 ಸ್ಥಾನ, ಕಾತೂರಿನ 13ರಲ್ಲಿ 7 ಸ್ಥಾನ, ಮಳಗಿ ಎಲ್ಲ 13 ಸ್ಥಾನ, ಚಿಗಳ್ಳಿ 13ರಲ್ಲಿ 9 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ.
ಕಾತೂರ ಸೊಸೈಟಿ ಒಂದರಲ್ಲಿ ಮಾತ್ರ ಕಾಂಗ್ರೆಸ್ ಸ್ಪರ್ಧೆ ನೀಡಿದ್ದನ್ನು ಬಿಟ್ಟರೆ ಇನ್ನುಳಿದ ಕಡೆಗೆ ಪರಾಭವಗೊಂಡಿದೆ. ಒಟ್ಟಿನಲ್ಲಿ ಶಾಸಕ ಶಿವರಾಮ ಹೆಬ್ಬಾರ ಬಿಜೆಪಿ ಸೇರ್ಪಡೆ ನಂತರ ತಾಲೂಕಿನ ಎಲ್ಲ ಸೊಸೈಟಿಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ವಿಜಯ ಪತಾಕೆ ಹಾರಿಸಿ ಹೊಸ- ಹಳೆಯ ಮುಖಂಡರು ಮತ್ತು ಕಾರ್ಯಕರ್ತರನ್ನು ಒಗ್ಗೂಡಿಸಿ ಪಕ್ಷವನ್ನು ಬಲಪಡಿಸಿದ್ದಾರೆ. ಉಪಚುನಾವಣೆ ನಂತರ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರಲ್ಲಿ ಹುಮ್ಮಸ್ಸು ಕ್ಷೀಣಿಸುತ್ತ ಬರುತ್ತಿದೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.