ವಿಜಯವಾಣಿ ಸುದ್ದಿಜಾಲ ಧಾರವಾಡ
ಜಿಲ್ಲೆಯ ಇಬ್ಬರು ಬಿಜೆಪಿ ನಾಯಕರು ಕಾಂಗ್ರೆಸ್ ಸೇರ್ಪಡೆ ಆಗಲಿದ್ದಾರೆ ಎಂಬ ಮಾಹಿತಿ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ತಿಳಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ಶಂಕರ ಪಾಟೀಲ ಮುನೇಕೊಪ್ಪ ಹಾಗೂ ಮಾಜಿ ಶಾಸಕ ಎಸ್.ಐ. ಚಿಕ್ಕನಗೌಡರ ಕಾಂಗ್ರೆಸ್‌ಗೆ ಬರುತ್ತಾರೆ ಎಂಬ ಮಾಹಿತಿ ಮಾತ್ರ ಇದೆ. ಹಂತ ಹಂತವಾಗಿ ಬೇರೆ ಜಿಲ್ಲೆ ನಾಯಕರು ಕಾಂಗ್ರೆಸ್‌ಗೆ ಬರಲಿದ್ದಾರೆ. ಆದರೆ ಯಾರು ಬರುತ್ತಾರೆ ಎಂಬ ಮಾಹಿತಿ ಇಲ್ಲ. ಸದ್ಯ ನಮ್ಮ ಜಿಲ್ಲೆಯ ಇಬ್ಬರು ನಾಯಕರು ಮಾತ್ರ ಬರುತ್ತಾರೆ ಎಂಬ ಮಾಹಿತಿ ಇದೆ. ಈವರೆಗೆ ಯಾರೂ ನನ್ನ ಸಂಪರ್ಕಕ್ಕೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ಅಧಿಕಾರ ಅವಧಿಯಲ್ಲಿ ಹಲವು ಯೋಜನೆಗಳಲ್ಲಿ ಅಕ್ರಮ ನಡೆದಿದೆ ಎಂಬ ಮಾಹಿತಿ ಇದೆ. ಹೀಗಾಗಿ ಸರ್ಕಾರ ಅವುಗಳ ಬಗ್ಗೆ ಪರಿಶೀಲನೆ ನಡೆಸಿ ತನಿಖೆ ನಡೆಸಲಾಗುವುದು ಎಂದ ಅವರು, ಲೋಕಸಭಾ ಚುನಾವಣೆ ಟಿಕೆಟ್ ನೀಡಲು ಈಗಾಗಲೇ ಸರ್ವೇ ಕಾರ್ಯ ನಡೆದಿದೆ. ಜಿಲ್ಲೆಯ ಎಲ್ಲ ಶಾಸಕರು, ನಾಯಕರ ಅಭಿಪ್ರಾಯ ಸಂಗ್ರಹದ ಬಳಿಕ ಒಂದು ತೀರ್ಮಾನಕ್ಕೆ ಬರಲಿದ್ದಾರೆ ಎಂದರು.