ಹಾಸನ: ತಮಗೆ ಸರಿಸಮನಾಗಿ ಯಾರೂ ಬೆಳೆಯಬಾರದು ಎಂಬ ಉದ್ದೇಶದಿಂದ ಮಾಜಿ ಸಚಿವ ವಿ.ಸೋಮಣ್ಣ ಅವರನ್ನು ಚಾಮರಾಜನಗರ ಹಾಗು ವರುಣಾ ಕ್ಷೇತ್ರದಲ್ಲಿ ವ್ಯವಸ್ಥಿತವಾಗಿ ಸೋಲಿಸಿದರು ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದರು.
ಕಾರ್ಯಕ್ರಮ ನಿಮಿತ್ತ ಮಂಗಳೂರಿನ ಕಲ್ಕಡ್ಕಕ್ಕೆ ಪ್ರಯಾಣ ಬೆಳೆಸುತ್ತಿದ್ದ ಯತ್ನಾಳ್ ಅವರು ಶನಿವಾರ ಮಾರ್ಗಮಧ್ಯೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ನಮ್ಮ ಸಮಾನವಾಗಿ ಯಾರು ಬೆಳೆಯಬಾರದು ಎಂಬ ಮನಸ್ಥಿತಿ ಅವರದ್ದಾಗಿದೆ. ಹೊಂದಾಣಿಕೆಯೇ ರಾಜಕಾರಣ ಎಂದುಕೊಂಡಿರುವ ನಾಯಕರು ಇನ್ನಾದರು ಬದಲಾಗಲಿ ಎಂದ ಯತ್ನಾಳ್ ಅವಹೇಳನಕಾರಿ ಪದಗಳ ಮೂಲಕ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ನಾವು ಜೋಡೆತ್ತುಗಳು ಇಬ್ಬರು ಒಟ್ಟಾಗಿಯೇ ದೆಹಲಿಗೆ ಹೋಗ್ತಿವಿ ಅಂದಿದ್ರು, ಆದರೆ ಈಗ ಒಬ್ಬರು ಬೆಂಗಳೂರಲ್ಲಿ ಇದ್ದಾರೆ, ಮತ್ತೊಬ್ಬರು ದೆಹಲಿಗೆ ಹೋಗಿದ್ದಾರೆ. ಇವರ ರಾಜಕೀಯ ಆಟಗಳನ್ನೆಲ್ಲ ನಾನು ನೋಡಿ ಬಿಟ್ಟಿದ್ದೇನೆ. ಮಾಜಿ ಸಚಿವ ವಿ.ಸೋಮಣ್ಣ ಸೇರಿದಂತೆ ಯಾರೂ ಪಕ್ಷ ಬಿಡುವುದಿಲ್ಲ. ನರೇಂದ್ರ ಮೋದಿ ಅವರೇ ಮತ್ತೊಮ್ಮೆ ದೇಶದ ಪ್ರಧಾನಿಯಾಗಬೇಕೆಂಬುದು ಎಲ್ಲರ ಕನಸಾಗಿದೆ. ಹಿಂದುತ್ವದ ಕಾರಣಕ್ಕಾಗಿಯಾದರೂ ಅಸಮಾಧಾನಿತರು ಬಿಜೆಪಿಗಾಗಿ ಕೆಲಸ ಮಾಡುತ್ತಾರೆಂಬ ವಿಶ್ವಾಸವಿದೆ. ಎರಡೂ ಕ್ಷೇತ್ರಗಳಲ್ಲಿ ವಿ.ಸೋಮಣ್ಣ ಅವರಿಗೆ ಲಿಂಗಾಯತರೇ ಓಟು ಹಾಕಲಿಲ್ಲ. ತಮ್ಮ ಪುತ್ರನ ವಿರುದ್ಧ ಶಿಕಾರಿಪುರದಲ್ಲಿ ಬಲಹೀನ ಅಭ್ಯರ್ಥಿ ಸ್ಪರ್ಧಿಸುವಂತೆ ಪಿತೂರಿ ಮಾಡಿದ್ದರು ಎಂದು ದೂರಿದರು.
ರಾಜ್ಯದ 28 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದರೆ ಅದು ಪ್ರಧಾನಿ ಮೋದಿ ಅವರಿಂದಲೇ ಹೊರತು ಈ ನಾಯಕರಿಂದ ಅಲ್ಲ. ನನ್ನನ್ನು ಕಡೆಗಣಿಸಿದರೆ ಬಿಜೆಪಿ ನೆಲಕಚ್ಚುವುದು ಖಚಿತ ಎಂದು ಹೈಕಮಾಂಡ್ ಮುಂದೆ ವರದಿ ಒಪ್ಪಿಸಿರುತ್ತಾರೆ. ಅದನ್ನೇ ಹೈಕಮಾಂಡ್ ನಾಯಕರು ನಂಬಿರುತ್ತಾರೆ. ಅದಕ್ಕಾಗಿಯೇ ಅವರು ಸಹ ಇದೊಂದು ಚುನಾವಣೆ ಹೀಗೆ ಆಗಲಿ ಎಂದು ಸುಮ್ಮನಿದ್ದಾರೆ. ಈ ರೀತಿಯ ವರದಿಯನ್ನು ನಂಬುವುದು ದುರಂತ ಎಂದು ಹೈಕಮಾಂಡ್ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸಿದರು.
ಒಬ್ಬ ವ್ಯಕ್ತಿಯ ಬ್ಲಾೃಕ್‌ಮೇಲ್‌ಗೆ ಹೈಕಮಾಂಡ್ ಹೆದರುವುದು ಒಳ್ಳೆಯದಲ್ಲ. ರಾಜ್ಯ ಬಿಜೆಪಿಯಲ್ಲಿ ಈಗ ಆಗುತ್ತಿರುವ ಬೆಳವಣಿಗೆಗಳು ಭವಿಷ್ಯದ ಚುನಾವಣೆಗಳ ಮೇಲೆ ಪರಿಣಾಮ ಬೀರುವುದಿಲ್ಲ. ಬಿ.ವೈ.ವಿಜಯೇಂದ್ರ ಬದಲು ಬೇರೆ ಯಾರಿಗಾದರೂ ಅಧ್ಯಕ್ಷ ಸ್ಥಾನ ನೀಡಿದ್ದರೂ ಲೋಕಸಭೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗೆಲ್ಲುತ್ತಿತ್ತು. ಆದರೆ, ಇವರು ಒಂದು ಆಟ ಹೂಡಿದ್ದಾರೆ. ಏನಾಗುತ್ತದೆ ಎಂಬುದನ್ನು ಕಾದು ನೋಡೋಣ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಲೋಕಸಭೆ ಚುನಾವಣೆ ವರೆಗೆ ಹೀಗೆ ಕುಂಟುತ್ತಾ ಸಾಗುತ್ತದೆ. ಕಾಂಗ್ರೆಸ್‌ನಲ್ಲಿ 40 ರಿಂದ 50 ಶಾಸಕರು ಅಸಮಾಧಾನಗೊಂಡಿದ್ದಾರೆ. ಗೆಲುವಿಗಾಗಿ ಘೋಷಿಸಿದ ಐದು ಗ್ಯಾರಂಟಿಗಳ ಈಡೇರಿಸಲು ಹಣ ಹೊಂದಿಸುವುದಕ್ಕಾಗಿ ಇತರ ಅಭಿವೃದ್ಧಿ ಮರೆತಿದ್ದಾರೆ. ದಲಿತರಿಗಾಗಿ ಮೀಸಲಿಟ್ಟ ಹಣವನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಹೀಗಾಗಿ ಕಾಂಗ್ರೆಸ್‌ನಲ್ಲೇ ಒಳಬೇಗುದಿ ಹೆಚ್ಚಿದೆ. ಈ ಸರ್ಕಾರಕ್ಕೆ ಭವಿಷ್ಯ ಇಲ್ಲ ಎಂಬುದು ಈಗಾಗಲೇ ಸ್ಪಷ್ಟವಾಗಿದೆ. ಸರ್ಕಾರ ಬಿದ್ದರೂ ಪರವಾಗಿಲ್ಲ, ಸಿದ್ದರಾಮಯ್ಯ ಅವರೇ ಕಾಂಗ್ರೆಸ್‌ನ ಕೊನೆಯ ಮುಖ್ಯಮಂತ್ರಿ ಆಗಬೇಕು ಅಂತ ಒಂದು ಗುಂಪು ಓಡಾಡ್ತಿದೆ ಎಂದರು.
ಕುಮಾರಸ್ವಾಮಿ ಶಕ್ತಿ ಹೆಚ್ಚಿದೆ:
ಬಿಜೆಪಿ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದ್ದರಿಂದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಶಕ್ತಿ ಹೆಚ್ಚಿದೆ. ಎಚ್‌ಡಿಕೆ ಬಿಜೆಪಿ ಜತೆ ಸಖ್ಯ ಬೆಳೆಸಿ ದೇಶದ ಹಿತದೃಷ್ಟಿಯಿಂದ ಒಳ್ಳೆಯ ಕೆಲಸ ಮಾಡಿದ್ದಾರೆ. ನರೇಂದ್ರ ಮೋದಿ ಅವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಗೌರವ ಕೊಡುತ್ತಾರೆ. ಹಾಗಾಗಿಯೇ ಬಿಜೆಪಿ ಬಗ್ಗೆ ಜೆಡಿಎಸ್ ವರಿಷ್ಠರಿಗೆ ಸದಾಭಿಪ್ರಾಯವಿದೆ. ಹಿಂದುಗಳು ಒಂದಾಗಬೇಕೆಂಬ ಕಾರಣದಿಂದ ಮೈತ್ರಿ ಮಾಡಿಕೊಳ್ಳಲಾಗಿದೆ. ಕರ್ನಾಟಕ ಸುರಕ್ಷಿತವಾಗಿರಬೇಕೆಂದರೆ ಜೆಡಿಎಸ್-ಬಿಜೆಪಿ ಯಾವಾಗಲೂ ಒಂದಾಗಿರಬೇಕೆಂದರು.