ಮೈಸೂರು: ಶಾಸಕ ಸತೀಶ್ ಜಾರಕಿಹೊಳಿ ಪರವಾಗಿ ಮಾನವ ಬಂಧುತ್ವ ವೇದಿಕೆ-ಕರ್ನಾಟಕ ವತಿಯಿಂದ ನಗರದ ಪುರಭವನದ ಅಂಬೇಡ್ಕರ್ ಪ್ರತಿಮೆ ಬಳಿ ಗುರುವಾರ ಪ್ರತಿಭಟನೆ ನಡೆಯಿತು.
ಹಿಂದು ಪದದ ಕುರಿತು ಸತೀಶ್ ಜಾರಕಿಹೊಳಿ ನೀಡಿರುವ ಹೇಳಿಕೆ ಐತಿಹಾಸಿಕ ಸತ್ಯವೂ ಮತ್ತು ಚರ್ಚೆಯಾಗಬೇಕಾದ ಗಂಭೀರ ವಿಚಾರವೂ ಆಗಿದೆ. ಹಿಂದು ಎಂಬ ಶಬ್ದ ಪಾರಸಿ ಅಥವಾ ಇರಾನಿ ಭಾಷೆಯ ಮೂಲವಾಗಿದೆ. ಅಶ್ಲೀಲ ಅರ್ಥವನ್ನು ಧ್ವನಿಸುತ್ತದೆ ಎಂದು ಜಾರಕಿಹೊಳಿ ಹೇಳುವ ಮೂಲಕ ಅದಕ್ಕೆ ಗ್ರಂಥಗಳ ಆಧಾರವನ್ನೂ ನೀಡಿದ್ದಾರೆ. ಅವರು ಎಲ್ಲಿಯೂ ಧರ್ಮದ ವಿಚಾರ ಮಾತನಾಡಿಲ್ಲ. ಈ ವಿಚಾರದಲ್ಲಿ ತಪ್ಪಿದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿಯೂ ತಮ್ಮ ಬದ್ಧತೆ ಸ್ಪಷ್ಟಪಡಿಸಿದ್ದಾರೆ. ಇವರ ಪಂಥಾಹ್ವಾನ ಸ್ವೀಕರಿಸಲು ಬೌದ್ಧಿಕವಾಗಿ ದುರ್ಬಲರಾಗಿರುವ ಬಿಜೆಪಿ ನಾಯಕರು ತಮ್ಮ ಧರ್ಮಕ್ಕೆ ಅಪಮಾನವಾಗಿದೆ ಎಂದು ವಿತಂಡವಾದ ಮಂಡಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ಬಿಜೆಪಿ ನಾಯಕರು ಜಾತಿ ತಾರತಮ್ಯ, ಅಸಮಾನತೆಯನ್ನು ಬೋಧಿಸುತ್ತಿದ್ದಾರೆ. ಸರ್ವರಿಗೂ ಸ್ವಾತಂತ್ರೃ, ಸಮಾನತೆ, ಬಂಧುತ್ವ ನೀಡುವ ಸಂವಿಧಾನದ ವಿರೋಧಿಗಳು ಎಂಬುದು ಜಗತ್ತಿಗೆ ತಿಳಿದಿರುವ ವಿಷಯ. ಆದರೆ, ಅವರು ಈಗ ನೀಡುತ್ತಿರುವ ವಿವೇಕರಹಿತ ಹೇಳಿಕೆಗಳಿಂದ ಅವರ ಬೌದ್ಧಿಕ ದಾರಿದ್ರೃವನ್ನು ಅವರೇ ಪ್ರದರ್ಶಿಸಿದ್ದಾರೆ. ಹಿಂದು ಎಂಬ ಪದ ವ್ಯಾಖ್ಯಾನ ಮಾಡಬಹುದಿತ್ತು. ಅದನ್ನು ಬಿಟ್ಟು ಈ ವಿಷಯವನ್ನು ತಮಗೆ ಬೇಕಾದಂತೆ ತಿರುಚಿ ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.
ಅಂಬೇಡ್ಕರ್, ಪೆರಿಯಾರ್, ಸಂತರು, ದಾರ್ಶನಿಕರು, ಸಾಹಿತಿಗಳು ಈ ಹಿಂದೆ ಎತ್ತಿರುವ ಪ್ರಶ್ನೆಗಳನ್ನೇ ಜಾರಕಿಹೊಳಿ ಈಗ ಪುನರುಚ್ಚರಿಸಿದ್ದಾರೆ. ಇದಕ್ಕೆ ಉತ್ತರಿಸಲು ಸಾಮರ್ಥ್ಯವಿಲ್ಲದ ಮನುವಾದಿಗಳು ಕುತಂತ್ರದಿಂದ ವಿಚಾರದ ಹಿಂದಿನ ಸತ್ಯವನ್ನೇ ನಾಶ ಮಾಡಲು ಯತ್ನಿಸಿದ್ದಾರೆ. ಬೌದ್ಧಿಕ ಸಂವಾದದ ಬದಲಿಗೆ ಇದನ್ನು ವಿವಾದ ಮಾಡಿ ತಮ್ಮ ಸರ್ಕಾರದ ಜನವಿರೋಧಿ ಅನ್ಯಾಯಗಳನ್ನು ಮುಚ್ಚಿ ಹಾಕುವ ಬಿಜೆಪಿ ಹುನ್ನಾರ ಖಂಡನೀಯ ಎಂದು ಕಿಡಿಕಾರಿದರು.
ಶ್ರೀ ಜ್ಞಾನಪ್ರಕಾಶ್ ಸ್ವಾಮೀಜಿ, ಸಾಹಿತಿ ಪ್ರೊ.ಕೆ.ಎಸ್.ಭಗವಾನ್, ಮಾಜಿ ಮೇಯರ್ ಪುರುಷೋತ್ತಮ್, ಮೈವಿವಿ ಸಂಶೋಧನಾ ವಿದ್ಯಾರ್ಥಿ ಸಂಘದ ಮುಖಂಡ ಮರಿದೇವಯ್ಯ, ಮುಖಂಡರಾದ ದ್ಯಾವಪ್ಪ ನಾಯಕ, ಮಂಜುನಾಥ್, ತುಂಬಲ ರಾಮಣ್ಣ ಸೇರಿದಂತೆ ಇನ್ನಿತರರು ಇದ್ದರು.