ಜಿಲ್ಲೆ

ಬಿಜೆಪಿ ದುರಾಡಳಿತದಿಂದ ಜನರಿಗೆ ಬೇಸರ

ಗದಗ: ನಗರದ ಭೀಷ್ಮಕೆರೆ ಎದುರಿನ ಕೆ.ಎಂ. ಸೈಯ್ಯದ್ ಕಟ್ಟಡದಲ್ಲಿ ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ಅವರ ಜನಸಂಪರ್ಕ ಕಾರ್ಯಾಲಯವನ್ನು ಬುಧವಾರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಿ.ಎಸ್. ಪಾಟೀಲ, ಶಾಸಕ ಎಚ್.ಕೆ. ಪಾಟೀಲ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಶಾಸಕ ಎಚ್.ಕೆ. ಪಾಟೀಲ, ‘ಇತ್ತೀಚೆಗೆ ಜರುಗಿದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸಲೀಂ ಅಹ್ಮದ್ ಅವರು ಅತ್ಯಧಿಕ ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಬಿಜೆಪಿಯ ದುರಾಡಳಿತದಿಂದ ಮತದಾರರು ಬೇಸತ್ತು ಹೋಗಿದ್ದಾರೆ. ಗ್ರಾಮೀಣ ಭಾಗದಲ್ಲಿ ಜನರು ಕಾಂಗ್ರೆಸ್ ಆಡಳಿತ ಬಯಸುತ್ತಿದ್ದಾರೆ ಎಂಬುದು ಚುನಾವಣೆಯ ಫಲಿತಾಂಶದಿಂದ ನಿಚ್ಚಳವಾಗಿದೆ’ ಎಂದರು.
ಕೆಪಿಸಿಸಿ ಕಾರ್ಯಾಧ್ಯಕ್ಷ, ವಿಪಂ ಸದಸ್ಯ ಸಲೀಂ ಅಹ್ಮದ್ ಮಾತನಾಡಿ, ಕ್ಷೇತ್ರ ವ್ಯಾಪ್ತಿಯ ಹಾವೇರಿ, ಧಾರವಾಡದಲ್ಲಿ ಕಚೇರಿಯನ್ನು ಆರಂಭಿಸಲಾಗಿದ್ದು, ಇದೀಗ ಗದಗ ಜಿಲ್ಲೆಯಲ್ಲೂ ಕಚೇರಿ ಆರಂಭಿಸಲಾಗಿದೆ. ಪಕ್ಷದ ಸಂಘಟನೆಯ ಜತೆಗೆ ಸಾರ್ವಜನಿಕರ ಸಮಸ್ಯೆ ಆಲಿಸಲು ಸಹಕಾರಿ ಆಗಲಿದೆ ಎಂದರು.
ರಾಜ್ಯಾದ್ಯಂತ ಡಿಜಿಟಲ್ ಸದಸ್ಯತ್ವ ಆರಂಭಿಸಲಾಗಿದ್ದು, ಮಾ.31ರವರೆಗೆ ಅಭಿಯಾನ ನಡೆಯಲಿದೆ. ಪಕ್ಷ ಸಂಘಟನೆಗೆ ಆದ್ಯತೆ ನೀಡಲಾಗಿದ್ದು, ಮಾಸ್ ಪಾರ್ಟಿಯಿಂದ ಕೇಡರ್ ಬೇಸ್ ಪಾರ್ಟಿ ಮಾಡುವ ಪ್ರಯತ್ನ ನಡೆದಿದೆ ಎಂದು ಹೇಳಿದರು.
ಇಬ್ರಾಹಿಂ ಪಕ್ಷ ತ್ಯಜಿಸಲ್ಲ: ಕಾಂಗ್ರೆಸ್ ಮುಖಂಡ ಸಿ.ಎಂ. ಇಬ್ರಾಹಿಂ ಕಾಂಗ್ರೆಸ್ ಪಕ್ಷ ತ್ಯಜಿಸಲ್ಲ. ಈ ಕುರಿತು ಅವರ ಮನವೊಲಿಸಲಾಗುವುದು. ಯೋಜನಾ ಆಯೋಗದ ಉಪಾಧ್ಯಕ್ಷ, ಎರಡು ಬಾರಿ ವಿಪ ಸದಸ್ಯರಾಗಿದ್ದಾರೆ. ಪಕ್ಷದಲ್ಲಿ ಅನೇಕ ಹುದ್ದೆಗಳನ್ನು ಇಬ್ರಾಹಿಂ ಅವರಿಗೆ ನೀಡಲಾಗಿದೆ. ಇದಲ್ಲದೆ, ಅನೇಕ ಅಲ್ಪಸಂಖ್ಯಾತ ಮುಖಂಡರಿಗೆ ಪಕ್ಷ ಸಾಕಷ್ಟು ಅವಕಾಶ ನೀಡಿದೆ ಎಂದು ಸಲೀಂ ಅಹ್ಮದ್ ಹೇಳಿದರು.
ಮಾಜಿ ಶಾಸಕರಾದ ಡಿ.ಆರ್. ಪಾಟೀಲ, ರಾಮಕೃಷ್ಣ ದೊಡ್ಡಮನಿ, ಮುಖಂಡರಾದ ನಾಗರಾಜ ಛಬ್ಬಿ, ಅನೀಲಕುಮಾರ ಪಾಟೀಲ, ವಾಸಣ್ಣ ಕುರಡಗಿ, ಜಿಪಂ ಮಾಜಿ ಅಧ್ಯಕ್ಷತೆ ಸುಜಾತಾ ದೊಡ್ಡಮನಿ, ನೀಲಮ್ಮ ಬೋಳನವರ, ಗದಗ-ಬೆಟಗೇರಿ ಶಹರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗುರಣ್ಣ ಬಳಗಾನೂರ, ಜಿಲ್ಲಾ ಯುವ ಕಾಂಗ್ರೆಸ ಸಮಿತಿ ಅಧ್ಯಕ್ಷ ಅಶೋಕ ಮಂದಾಲಿ, ಬಿ.ಬಿ. ಅಸೂಟಿ, ಬಸವರಾಜ ಕಡೇಮನಿ ಇದ್ದರು.

ನದಿಗಳ ಜೋಡಣೆ ಅತ್ಯಂತ ಸೂಕ್ಷ್ಮ ವಿಷಯ. ಈ ಕುರಿತು ನೀರಾವರಿ ತಜ್ಞರೊಂದಿಗೆ ರ್ಚಚಿಸಬೇಕು. ನೆಲಜಲ ವಿಷಯದಲ್ಲಿ ಸರ್ಕಾರ ಸರ್ವ ಪಕ್ಷಗಳ ಸಭೆ ಕರೆಯಬೇಕು. ವಿಸõತ ಚರ್ಚೆಯ ನಂತರವೇ ಮುಖ್ಯಮಂತ್ರಿ ಅವರು ಮುಂದಿನ ಕ್ರಮ ಜರುಗಿಸಬೇಕು.|ಎಚ್.ಕೆ. ಪಾಟೀಲ ಶಾಸಕಕೇಂದ್ರ ಸರ್ಕಾರದ ಆಯವ್ಯಯ ಸಂಪೂರ್ಣ ಬೋಗಸ್ ಆಗಿದೆ. ಇದೊಂದು ಲಾಲಿಪಪ್ ಬಜೆಟ್. ಮೋದಿ ಪ್ರಧಾನಿಯಾಗಿ 7 ವರ್ಷದಲ್ಲಿ ಸುಮಾರು 60 ಲಕ್ಷ ಉದ್ಯೋಗ ಕಳೆದುಹೋಗಿವೆ. ಆದರೂ ಸಹ ಪ್ರಸಕ್ತ ಬಜೆಟ್​ನಲ್ಲಿ ಉದ್ಯೋಗ ಸೃಷ್ಟಿಸಲಾಗುವುದು ಎಂದು ಸುಳ್ಳು ಹೇಳಿ ಜನರಿಗೆ ಮೋಸ ಮಾಡುತ್ತಿದ್ದಾರೆ. ಮೇಕೆದಾಟು, ಮಹದಾಯಿ ಬಗ್ಗೆ ಚಕಾರ ಎತ್ತಿಲ್ಲ. ಕರೊನಾ ಸಂದರ್ಭದಲ್ಲಿ ಆಗಿರುವ 6 ಸಾವಿರ ಕೋಟಿ ರೂ. ಅವ್ಯವಹಾರಕ್ಕೆ ಉತ್ತರವಿಲ್ಲ. ರಾಜ್ಯಕ್ಕೆ ನಯಾಪೈಸೆ ಕೊಡುಗೆ ಇಲ್ಲ.| ಸಲೀಂ ಅಹ್ಮದ್ ವಿಧಾನ ಪರಿಷತ್ ಸದಸ್ಯ