ಮೈಸೂರು: ಬಿಜೆಪಿಯ ಹಿರಿಯ ನಾಯಕರಾದ ಎಚ್. ವಿಶ್ವನಾಥ್ ಅವರಿಗೆ ಬಿಜೆಪಿ ತತ್ವ, ಸಿದ್ದಾಂತ ಪಥ್ಯ ಆಗದೆ ಇದ್ದರೆ ಪಕ್ಷದಲ್ಲಿ ಏತಕ್ಕೆ ಇದ್ದೀರಿ? ಬೇರೆ ಕಡೆ ಹೋಗಬಹುದಲ್ಲವೇ ಎಂದು ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ನಗರದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಪಕ್ಷದಲ್ಲಿದ್ದುಕೊಂಡು ಬಿಜೆಪಿ ಪಕ್ಷದವರ ವಿರುದ್ಧವೇ ವಿಶ್ವನಾಥ್ ಹೇಳಿಕೆ ಕೊಡುವುದನ್ನು ಮಾಡುತ್ತಿದ್ದಾರೆ. ಈ ರೀತಿಯ ಚುಚ್ಚು ಮಾತುಗಳ ರಾಜಕಾರಣವನ್ನು ಜನರು ನೋಡಿ ಬೇಸತ್ತು ಹೋಗಿದ್ದಾರೆ. ಹಾಗಾಗಿ ವಿಶ್ವನಾಥ್ ಅವರಿಗೆ ಜನರು ಚುನಾವಣೆಯಲ್ಲಿ ಎಚ್ಚರಿಕೆಯ ಸಂದೇಶವನ್ನು ಸಹ ನೀಡಿದ್ದಾರೆ ಎಂದು ಹೇಳಿದರು.
ವಿ.ಶ್ರೀನಿವಾಸ ಪ್ರಸಾದ್ ಅವರು ಮೈಸೂರು, ಚಾಮರಾಜನಗರದ ಭಾಗದ ಅತ್ಯಂತ ಹಿರಿಯ ರಾಜಕಾರಣಿ. ಅವರನ್ನು ಎಲ್ಲ ಸಮುದಾಯದವರು ಗೌರವಿಸುತ್ತಾರೆ. ವಿ.ಶ್ರೀನಿವಾಸ್ ಪ್ರಸಾದ್ ಅವರು ಸಾರ್ವಜನಿಕ ಹಾಗೂ ವೈಯಕ್ತಿಕ ಜೀವನದಲ್ಲಿ ಮೇಲ್ಪಂಕ್ತಿ ಹಾಕಿಕೊಟ್ಟಿರುವ ನಾಯಕರು. ಅವರ ವಿರುದ್ಧ ಯಾರೇ ಮಾತನಾಡಿದರೂ ನನ್ನ ಮನಸ್ಸಿಗೆ ನೋವುಂಟಾಗುತ್ತದೆ ಎಂದರು.