ವಿಜಯಪುರ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಜಾತ್ಯಾತೀತ ಜನತಾದಳ ಹಾಗೂ ಭಾರತೀಯ ಜನತಾ ಪಕ್ಷ ಮೈತ್ರಿ ಮಾಡಿಕೊಂಡರೆ ಒಳ್ಳೆಯದು, ಅದರಲ್ಲೇನು ತಪ್ಪಿದೆ. ಮೈತ್ರಿ ಆದರೆ ಆಗಲಿ ಎಂದು ವಿಜಯಪುರ ಸಂಸದ ರಮೇಶ ಜಿಗಜಿಣಗಿ ಅಭಿಪ್ರಾಯಪಟ್ಟರು.
ಸೋಮವಾರ ನೂತನ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆ ಪೂರ್ವ ಮೈತ್ರಿಯನ್ನು ನಮ್ಮ ನಾಯಕರು ಹೈಕಮಾಂಡ್ ಮಟ್ಟದಲ್ಲಿ ಮಾಡಿಕೊಂಡರೆ ತಮ್ಮದು ಯಾವುದೇ ಅಭ್ಯಂತರವಿಲ್ಲ. ಈ ಹಿಂದೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಜತೆ ನಾವಿದ್ದೇವು.ದೇವೇಗೌಡರು ಸಿಎಂ ಆಗಿದ್ದಾಗ ನಾನು ಸಚಿವನಾಗಿ ಕೆಲಸ ಮಾಡಿದ್ದೇನೆ ಎಂದರು.
ಜೆಡಿಎಸ್ ಜತೆ ಯಾರೇ ಮೈತ್ರಿಗೆ ಬಂದರೂ ಸಹ ಸ್ವಾಗತಿಸುತ್ತೇವೆ. ಬೇಕಾದರೆ ನೀವು ಬನ್ನಿ ಬೇಡ ಅನ್ನುವದಿಲ್ಲ ಎಂದು ಪತ್ರಕರ್ತರಿಗೆ ನಸುನಗುತ್ತಲೇ ಉತ್ತರಿಸಿದರು.
ತಮಿಳುನಾಡು ಸಿಎಂ ಪುತ್ರ ಹೇಳಿಕೆಗೆ ಖಂಡನೆ: ಸನಾತನ ಹಿಂದು ಧರ್ಮದ ಬಗ್ಗೆ ತಮಿಳುನಾಡು ಸಚಿವ ಹಾಗೂ ಸಿಎಂ ಸ್ಟಾೃಲಿನ್ ಪುತ್ರ ಉದಯನಿಧಿ ಅವಮಾನಕಾರಿ ಹೇಳಿಕೆಯನ್ನು ಖಂಡಿಸಿದ ಸಂಸದ ರಮೇಶ ಜಿಗಜಿಣಗಿ, ಸಣ್ಣ ಸಣ್ಣ ಹುಡುಗರು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಉದಯನಿಧಿ ಇಂದು ನಿನ್ನೆ ಮಂತ್ರಿಯಾಗಿದ್ದಾರೆ. ನಾವು ಇಂದಿರಾಗಾಂಧಿ, ರಾಜೀವಗಾಂಧಿ, ಸಂಜಯಗಾಂಧಿ ಕಾಲದಲ್ಲಿ ನೋಡಿದ್ದೇನೆ. ಧರ್ಮದ ವಿಷಯದಲ್ಲಿ ಯಾರು ಕೈ ಹಾಕುತ್ತಾರೆ ಅವರು ಉಳಿಯಲ್ಲಾ ಎಂದರು.
ದೇಶದಲ್ಲಿ ಯಾರು ಉಳಿಯಲ್ಲ, ಅವರು ಯಾವ ಪಕ್ಷಕ್ಕೆ ಅಂಟಿಕೊಂಡಿದ್ದಾರೆ. ಆ ಪಕ್ಷವೂ ಉಳಿಯಲ್ಲ. ಧರ್ಮದ ವಿಷಯದಲ್ಲಿ ಯಾರೂ ಕೂಡ ಯಾವ ಪಕ್ಷದವರು ಸಹ ಭಾಗಿಯಾಗಬಾರದು. ಧರ್ಮದಲ್ಲಿ ಕೈ ಹಾಕಿದವರು ಈ ದೇಶದಲ್ಲಿ ಉಳಿದಿಲ್ಲ ಎಂದು ಪುನರುಚ್ಚರಿಸಿದರು.
ಇಂಡಿಯಾ ಬದಲು ಭಾರತ ಸ್ವದೇಶಿ ಕೂಗು: ಇಂಡಿಯಾ ಬದಲು ದೇಶಕ್ಕೆ ಭಾರತ ಹೆಸರು ಕರೆಯಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿರುವುದನ್ನು ಸಂಸದ ರಮೇಶ ಜಿಗಜಿಣಗಿ ಸ್ವಾಗತಿಸಿದರು.
ಎಲ್ಲ ದೇಶಗಳಿಗೆ ಒಂದೇ ಹೆಸರು, ಭಾರತಕ್ಕೆ ಯಾಕೆ ಎರಡು ಹೆಸರು ಎಂದು ಪ್ರಶ್ನಿಸಿದರು.
ಸ್ವಾೃತಂತ್ರ ಪೂರ್ವ ವಿದೇಶಿಗರು ಇಂಡಿಯಾ ಎಂದು ಕರೆಯುತ್ತಿದ್ದರು. ಇಂದು ನಾವ್ಯಾಕೆ ಅದೇ ಹೆಸರನ್ನು ಕರೆಯಬೇಕು. ಭಾರತ ಎಂದು ಕರೆಯುವುದರಲ್ಲಿ ಯಾವುದೇ ತಪ್ಪಿಲ್ಲ. ಏಕೆಂದರೆ ಭಾರತ ನಮ್ಮ ಹೆಮ್ಮೆ, ಹೀಗಾಗಿ ಭಾರತ ಹೆಸರು ಕರೆಯೋದಕ್ಕೆ ನನ್ನದು ಒತ್ತಾಯವಿದೆ ಎಂದರು.
ನನ್ನದು ಏನಿದ್ರು ಒಣಕುಸ್ತಿ: ವಿಜಯಪುರ ಮೀಸಲು ಲೋಕಸಭೆ ಸ್ಥಾನಕ್ಕೆ ಮತ್ತೊಮ್ಮೆ ಸ್ಪರ್ಧಿಸಲು ತಾವು ಬಯಸಿದ್ದೇನೆ. ಜನರ ಅಭಿಪ್ರಾಯ ಸಹ ಅದೇ ಇದೆ. ಆದರೆ ಕೆಲವರು ತಾವು ಸ್ಪರ್ಧಿಸಬೇಕೆಂದು ತಮ್ಮ ಹೆಸರು ಹಾಳು ಮಾಡುತ್ತಿದ್ದಾರೆ ಎಂದು ಸಂಸದ ರಮೇಶ ಜಿಗಜಿಣಗಿ ಆಕ್ರೋಶ ಹೊರ ಹಾಕಿದರು.
ಸಾವಿರ ಜನ ಟಿಕೆಟ್ ಆಕ್ಷಾಂಕಿಗಳು ಬರಲಿ, ಅದನ್ನು ಬಹಿರಂಗವಾಗಿ ಹೇಳಲಿ ಅದು ಬಿಟ್ಟು ಸಣ್ಣ ಸಣ್ಣ ಹುಡುಗರಿಗೆ ರಾತ್ರಿ ವ್ಯವಸ್ಥೆ ಮಾಡಿ, ಸಾಮಾಜಿಕ ಜಾಲಜಾಣದಲ್ಲಿ ಅಪಪ್ರಚಾರ ಮಾಡಿಸುತ್ತಿದ್ದಾರೆ. ಇದು ಸರಿಯಲ್ಲಿ ಹೈ ಕಮಾಂಡ್ ಟಿಕೆಟ್ ತಮಗೆ ನೀಡುತ್ತದೆ ಎನ್ನುವ ಭರವಸೆ ನನಗೆ ಎಂದರು.
ನಾನು ಈಗಾಗಲೇ 12 ಚುನಾವಣೆ ಎದುರಿಸಿದ್ದೇನೆ. ಅದರಲ್ಲಿ 11 ಬಾರಿ ಗೆಲುವು ಸಾಧಿಸಿ ಒಮ್ಮೆ ಮಾತ್ರ ಸೋತಿದ್ದೇನೆ. ಅದು ಜನ ನನ್ನ ಮೇಲೆ ಇಟ್ಟಿರುವ ನಂಬಿಕೆಯಾಗಿದೆ. ನನ್ನಿಂದ ಹಣದ ಅಪೇಕ್ಷೆ ಇಟ್ಟುಕೊಳ್ಳಬೇಡಿ ಎಂದು ಹಲವು ಬಾರಿ ಹೇಳಿದ್ದೇನೆ. ಒಂದು ದಿನ ನೀವು ನನ್ನ ಸಲುವಾಗಿ ಮತಹಾಕಿ, ನಾನು ಐದು ವರ್ಷಗಳ ಕಾಲ ಯಾವುದೇ ಫಲಾಪೇಕ್ಷೆ ಇಲ್ಲದೇ ಸೇವೆ ಸಲ್ಲಿಸುತ್ತೇನೆ. ನನ್ನದು ಒಂದು ತರ ಒಣಕುಸ್ತಿ ಇದ್ದ ಹಾಗೆ ಎಂದ ಅವರು, ತಮ್ಮ ವಿರುದ್ಧ ಪಿತೂರಿ ನಡೆಸುತ್ತಿರುವವರ ಕುರಿತು ದೂರು ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಬಿಜೆಪಿ ರಾಜ್ಯ ಕಾರ್ಯದರ್ಶಿ ಜಗದೀಶ ಹಿರೇಮನಿ, ಮಹಾನಗರ ಪಾಲಿಕೆ ಸದಸ್ಯ ಶಿವರುದ್ರಪ್ಪ ಬಾಗಲಕೋಟ, ಮಲ್ಲಿಕಾರ್ಜುನ ಜೋಗುರು, ಸಂಜಯ ಪಾಟೀಲ ಕನಮಡಿ, ಬಿಜೆಪಿ ಜಿಲ್ಲಾ ಮಾಧ್ಯಮ ಸಂಚಾಲಕ ವಿಜಯ ಜೋಶಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.