ಮೈಸೂರು: ಬಿಜೆಪಿ-ಜೆಡಿಎಸ್ ಸಮನ್ವಯ ಸಮಿತಿ ರಚಿಸಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ಜಂಟಿಯಾಗಿ ಹೋರಾಟ ಮಾಡಲು ನಿರ್ಧರಿಸಿದ್ದೇವೆಂದು ಹೇಳಿರುವುದು ಎರಡು ಪಕ್ಷಗಳ ರಾಜಕೀಯ ದಿವಾಳಿತನವನ್ನು ಎತ್ತಿ ತೋರಿಸುತ್ತದೆ ಎಂದು ಕೆಪಿಸಿಸಿ ವಕ್ತಾರ ಎಚ್.ಎ.ವೆಂಕಟೇಶ್ ಟೀಕಿಸಿದ್ದಾರೆ.
ಲೋಕಸಭಾ ಚುನಾವಣೆ ಕಳೆದು ಒಂದೂವರೆ ವರ್ಷಗಳಾಗಿವೆ. ಈಗ ಸಮನ್ವಯ ಸಮಿತಿ ರಚಿಸುವ ಔಚಿತ್ಯ ಎರಡು ಕುಟುಂಬಗಳ ಮಧ್ಯ ಅಧಿಕಾರ ಹಂಚಿಕೆಗಾಗಿ ಸಮನ್ವಯ ಸಮಿತಿಯೇ? ಎಂಬುದನ್ನು ಸ್ಪಷ್ಟಪಡಿಸಬೇಕಾಗಿದೆ ಎಂದು ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ
ವಿಜಯೇಂದ್ರ, ಕುಮಾರಸ್ವಾಮಿಗೆ ತಮ್ಮ ಅಧಿಕಾರ ಕಳೆದುಕೊಳ್ಳುವ ಆತಂಕ ಎದುರಾಗಿದೆ. ತಮ್ಮ ಕುರ್ಚಿಯನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಲು ಸಮನ್ವಯ ಸಮಿತಿ ರಚಿಸಿ ರಾಜಕೀಯವಾಗಿ ತಮ್ಮ ಅವಶ್ಯಕತೆ ತೋರಿಸುವ ಉದ್ದೇಶವೇ ಹೊರತು ಮತ್ತೇನು ಇಲ್ಲ.
ಸಂಪೂರ್ಣ ಬಹುಮತ ಗಳಿಸಿ ಎಂದು ಅಧಿಕಾರ ಪಡೆಯದ ಈ ಎರಡು ಪಕ್ಷಗಳ ನಾಯಕರ ವರ್ತನೆಯನ್ನು ಜನ ಗಮನಿಸುತ್ತಿದ್ದಾರೆ. ಪಕ್ಷ ಸಂಘಟಿಸುವ ಶಕ್ತಿ ವಿಜಯೇಂದ್ರರಿಗೆ ಇಲ್ಲ, ಕೇಂದ್ರದಿಂದ ಯಾವುದೇ ಯೋಜನೆಯನ್ನು ತರಲು ವಿಫಲವಾಗಿರುವ ಕುಮಾರಸ್ವಾಮಿ ಮತ್ತೆ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಈಗಾಗಲೇ ಈ ಇಬ್ಬರ ನಡುವೆ ಪೈಪೋಟಿ ವ್ಯಕ್ತವಾಗಿದೆ ಎಂದು ಹರಿಹಾಯ್ದಿದ್ದಾರೆ.
ಯಾವ ಕಾರಣದಿಂದಲೂ ಇವರ ಉದ್ದೇಶ ಈಡೇರುವುದಿಲ್ಲ. ಜನಮನ್ನಣೆ ಸಾಧ್ಯವಾಗದ ಎರಡು ಪಕ್ಷದ ನಾಯಕರು ಅಧಿಕಾರಕ್ಕಾಗಿ ನಡೆಸುತ್ತಿರುವ ಕುತಂತ್ರ ನೋಡಿದರೆ ಮರುಕ ಹುಟ್ಟುತ್ತದೆ. ಬಿ.ಎಸ್.ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ಅವರ ರಾಜಕೀಯ ಹೊಂದಾಣಿಕೆ ಯಾವ ರೀತಿ ಮುರಿದುಬಿತ್ತು. ರಾಜಕೀಯ ಇತಿಹಾಸದಲ್ಲಿ ದಾಖಲಾಗಿದೆ. ಪ್ರಸ್ತುತ ಕುಮಾರಸ್ವಾಮಿ ಹಾಗೂ ವಿಜಯೇಂದ್ರ ಅವರು ಜನಗಳ ಮುಂದೆ ಒಟ್ಟಿಗೆ ಕಾಣಿಸಿಕೊಳ್ಳುವುದು ನಿಜಕ್ಕೂ ವಿಪರ್ಯಾಸ ಎಂದು ಕುಟುಕಿದ್ದಾರೆ.
ರಾಜ್ಯ ಸರ್ಕಾರದ ಆಡಳಿತದ ವೈಫಲ್ಯವನ್ನು ಹೋರಾಟ ಮಾಡುವ ಯಾವುದೇ ನೈತಿಕತೆ ವಿರೋಧ ಪಕ್ಷಗಳಿಗೆ ಇಲ್ಲದಂತಾಗಿದೆ. ಕಾಂಗ್ರೆಸ್ ಸರ್ಕಾರ ಜನಪರ ಆಡಳಿತದ ಮೂಲಕ ಕರ್ನಾಟಕದಲ್ಲಿ ಬಹಳ ಶಕ್ತಿಯುತವಾಗಿದೆ.
ಸಮನ್ವಯ ಸಮಿತಿ ರಚಿಸುತ್ತೇವೆ ಎಂದು ಹೇಳುವುದರ ಮೂಲಕ ಎರಡು ಪಕ್ಷಗಳಲ್ಲಿ ವಿಶ್ವಾಸ ಮೂಡುತ್ತಿಲ್ಲ ಎಂಬುದೇ ಅರ್ಥ. ಸಮನ್ವಯ ಸಮಿತಿ ರಚನೆ ರಾಜ್ಯದ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಹುಡುಕುವುದಕ್ಕಲ್ಲ. ಅಧಿಕಾರದ ಜಪ ಮಾಡುತ್ತಿರುವ ವಿರೋಧ ಪಕ್ಷದವರಿಗೆ ಯಾವುದೇ ಚುನಾವಣೆಯಲ್ಲೂ ಯಶಸ್ಸು ಅಸಾಧ್ಯ ಎಂದು ಹೇಳಿದ್ದಾರೆ.