ಜಿಲ್ಲೆ

ಬಿಜೆಪಿ, ಜೆಡಿಎಸ್ ಮುಖಂಡರು ಕಾಂಗ್ರೆಸ್​ಗೆ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಬಿಜೆಪಿ ಮತ್ತು ಜೆಡಿಎಸ್​ನ ಕೆಲವು ಮುಖಂಡರು ಕಾಂಗ್ರೆಸ್​ಗೆ ಸೇರ್ಪಡೆಯಾಗಲು ಉತ್ಸುಕರಾಗಿದ್ದಾರೆ. ಅವರ ಸೇರ್ಪಡೆ ಬಗ್ಗೆ ಪಕ್ಷದ ವರಿಷ್ಠರು ಸೂಕ್ತ ಸಮಯದಲ್ಲಿ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಶಾಸಕರಾದ ಎಸ್.ಟಿ. ಸೋಮಶೇಖರ ಮತ್ತು ಶಿವರಾಮ ಹೆಬ್ಬಾರ ಅವರನ್ನು ಪಕ್ಷದಿಂದ ಉಚ್ಛಾಟಿಸುವ ಮಾಹಿತಿಯಿದೆ. ಈಗಾಗಲೇ ಇಬ್ಬರೂ ನಮ್ಮ ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ರಾಜ್ಯ ಬಜೆಟ್ ಅನ್ನು ಅವರು ಸ್ವಾಗತಿಸಿದ್ದಾರೆ. ಅವರು ಯಾವಾಗ ಅಧಿಕೃತವಾಗಿ ಪಕ್ಷ ಸೇರ್ಪಡೆಯಾಗುತ್ತಾರೆ ಎಂಬುದನ್ನು ನೋಡಬೇಕಿದೆ ಎಂದರು.

ನಟಿ ರನ್ಯಾ ರಾವ್ ಚಿನ್ನ ಸ್ಮಗ್ಲಿಂಗ್ ಪ್ರಕರಣವನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ ಮತ್ತು ಇತರ ಸಂಸ್ಥೆಗಳು ತನಿಖೆ ನಡೆಸುತ್ತಿವೆ. ಇದರಲ್ಲಿ ಯಾರೇ ಭಾಗಿಯಾಗಿದ್ದರೂ ಸೂಕ್ತ ಕ್ರಮವಾಗಲಿದೆ. ಸದ್ಯ ಪ್ರಕರಣ ತನಿಖಾ ಹಂತದಲ್ಲಿದೆ. ಯಾವುದೇ ಪಕ್ಷದವರಿರಲಿ, ಅವರ ರಕ್ಷಣೆಗೆ ಯಾರೂ ಮುಂದಾಗಬಾರದು. ತಪ್ಪಿತಸ್ಥರು ಯಾರೇ ಆಗಿದ್ದರೂ ಶಿಕ್ಷೆಯಾಗಲೇಬೇಕು ಎಂದರು.

ರಾಜ್ಯ ಸಚಿವ ಸಂಪುಟ ಮೇ ತಿಂಗಳಲ್ಲಿ ವಿಸ್ತರಣೆಯಾಗುವ ಸಾಧ್ಯತೆಯಿದೆ. ಹಿಂದೆಯೇ ಸಚಿವ ಸಂಪುಟದಲ್ಲಿ ನನಗೆ ಸ್ಥಾನ ಸಿಗಬೇಕಿತ್ತು. ಈ ಬಾರಿ ಸಿಗುವ ವಿಶ್ವಾಸವಿದೆ ಎಂದರು.