ಜಿಲ್ಲೆ

ಬಿಜೆಪಿ ಜತೆ ಮೈತ್ರಿ ಪ್ರಶ್ನೆಯೇ ಇಲ್ಲ : ಎಚ್‌ಡಿಕೆ ಹೇಳಿಕೆ ರಾಷ್ಟ್ರೀಯ ಪಕ್ಷಗಳ ವಿರುದ್ಧ ಕಿಡಿ

ಚನ್ನಪಟ್ಟಣ: ಬಿಜೆಪಿಯವರು ಯಾವ ಸಾಧನೆ ಮಾಡಿದ್ದಾರೆ ಎಂದು ಅವರ ಜತೆ ಕೈ ಜೋಡಿಸಲಿ. ಮುಂದಿನ ಚುನಾವಣೆಯನ್ನು ಜೆಡಿಎಸ್ ಏಕಾಂಗಿಯಾಗಿ ಎದುರಿಸಲಿದೆ. ಎರಡೂ ರಾಷ್ಟ್ರೀಯ ಪಕ್ಷಗಳಿಗಿಂತ ಒಂದು ಸ್ಥಾನ ಹೆಚ್ಚು ನಾವೇ ಇರುತ್ತೇವೆ. ಬಿಜೆಪಿ ತೆ ಮೈತ್ರಿ ಪ್ರಶ್ನೆಯೇ ಇಲ್ಲ ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ಚಕ್ಕೆರೆಯಲ್ಲಿ ಸೋಮವಾರ ಸರ್ಕಾರಿ ಪಿಯು ಕಾಲೇಜಿನ ಕಟ್ಟಡ ಉದ್ಘಾಟನೆ ನೆರವೇರಿಸಿ ಮಾತನಾಡಿ, ರಾಜ್ಯದಲ್ಲಿ ಜೆಡಿಎಸ್ ಯಾರ ಮನೆ ಬಾಗಿಲಿಗೂ ಹೊಂದಾಣಿಕೆಗಾಗಿ ಹೋಗಿಲ್ಲ. ಬೇಕಾದವರು ನಮ್ಮ ಮನೆಗೇ ಬಂದಿದ್ದಾರೆ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಮೈತ್ರಿ ಮಾಡಿಕೊಳ್ಳಲಿದೆ ಎಂದು ಬಿಜೆಪಿ, ಕಾಂಗ್ರೆಸ್‌ನವರೇ ಸುದ್ದಿ ಹಬ್ಬಿಸುತ್ತಿದ್ದಾರೆ. ಬಿಜೆಪಿ ಜತೆ ಮೈತ್ರಿ ಎನ್ನುವುದು ನೂರಕ್ಕೆ ನೂರು ಸುಳ್ಳು. ಜೆಡಿಎಸ್‌ಗೆ ತನ್ನದೇ ಆದ ಸಿದ್ಧಾಂತವಿದೆ. ತಳಮಟ್ಟದಿಂದ ಪಕ್ಷ ಕಟ್ಟುವ ಕಾರ್ಯಕರ್ತರಿದ್ದಾರೆ ಎಂದರು.

ಯೋಗೇಶ್ವರ್‌ಗೆ ಟಾಂಗ್: ಕ್ಷೇತ್ರದ ಅಭಿವೃದ್ಧಿ ಮಾಡುತ್ತಿರುವುದು ನಾನು. ಇಲ್ಲಿನ ಎಂಎಲ್‌ಸಿ ಅಧಿಕಾರಿಗಳನ್ನು ಕರೆದುಕೊಂಡು ಹೋಗಿ ಸ್ಕೋಪ್ ತೆಗೆದುಕೊಳ್ಳುತ್ತಿದ್ದಾರೆ ಎಂದು ಸಿಪಿವೈಗೆ ಟಾಂಗ್ ನೀಡಿದರು. ಕಾವೇರಿ ನೀರಾವರಿ ನಿಗಮದಿಂದ 100 ಕೋಟಿ ರೂ. ವೆಚ್ಚದಲ್ಲಿ ಹೊಸ ನೀರಾವರಿ ಕಾಮಗಾರಿ ಅನುಷ್ಠಾನಗೊಳಿಸಲು ಸರ್ಕಾರದ ಮಟ್ಟದಲ್ಲಿ ಮಾತುಕತೆ ನಡೆಸುತ್ತಿದ್ದೇನೆ ಎಂದರು. ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಇತ್ತೀಚೆಗೆ ನಾಟಕೀಯ ಬೆಳವಣಿಗೆ ಶುರುವಾಗಿದ್ದು, ಅತಿವೃಷ್ಟಿಯಿಂದ ರೈತರ ಬೆಳೆ ಹಾನಿಯಾದಾಗ 6 ಲಕ್ಷ ರೂ. ವೈಯಕ್ತಿಕ ಪರಿಹಾರ ನೀಡಿದ್ದೇನೆ. ಆಗ ಈ ಎಂಎಲ್‌ಸಿ ಎಲ್ಲಿ ಮಾಯವಾಗಿದ್ದರು, ಸ್ಥಳಕ್ಕೆ ಬಂದಿದ್ದ ಸಂಸದರು ಎಷ್ಟು ಪರಿಹಾರ ನೀಡಿದರು ಎಂದು ಯೋಗೇಶ್ವರ್ ಮತ್ತು ಡಿ.ಕೆ.ಸುರೇಶ್ ವಿರುದ್ಧ ಪರೋಕ್ಷ ದಾಳಿ ನಡೆಸಿದರು.

ಹಣ ಹೊಡೆಯುವ ತಂತ್ರ: ತಾಲೂಕು ಅಭಿವೃದ್ಧಿಗೆ ಯೋಗೇಶ್ವರ್ 50 ಕೋಟಿ ರೂ. ಹಣ ತರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಎಚ್‌ಡಿಕೆ, ಅದು ರಾಜ್ಯದ ತೆರಿಗೆ ದುಡ್ಡು, ಅವರ ಕೈಯಿಂದ ಹಾಕುತ್ತಿಲ್ಲ. ಈ ಅನುದಾನ ಹಣ ಹೊಡೆಯಲೋ, ಕಾರ್ಯಕರ್ತರನ್ನು ಉಳಿಸಲೋ ಎಂಬುದು ಗೊತ್ತಿದೆ. ಕ್ಷೇತ್ರದ ಜನತೆಗೆ ಈ ಎಲ್ಲ ನಾಟಕಗಳು ಗೊತ್ತಿದೆ. ಜನರನ್ನು ದಾರಿ ತಪ್ಪಿಸಲು ಸಾಧ್ಯವಿಲ್ಲ. ಚನ್ನಪಟ್ಟಣ ಜೆಡಿಎಸ್ ಭದ್ರಕೋಟೆ ಎಂಬುದನ್ನು ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಮತ್ತೊಮ್ಮೆ ಸಾಬೀತು ಮಾಡುತ್ತಾರೆ ಎಂದು ಎಚ್.ಡಿ.ಕುಮಾರಸ್ವಾಮಿ ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ತಹಸೀಲ್ದಾರ್ ನಾಗೇಶ್, ತಾಪಂ ಇಒ ಚಂದ್ರು, ಜೆಡಿಎಸ್ ಮುಖಂಡರಾದ ಗೋವಿಂದಹಳ್ಳಿ ನಾಗರಾಜು, ವಡ್ಡರಹಳ್ಳಿ ರಾಜಣ್ಣ, ಬೋರ್‌ವೆಲ್ ರಾಮಚಂದ್ರು. ವಾಜಿ ಪ್ರಧಾನ್ ಚಕ್ಕೆರೆ ಎ.ಸಿ.ಪುಟ್ಟಸ್ವಾಮಿ(ರಾಜು), ಬೈರಾಪಟ್ಟಣ ರವಿಕುವಾರ್ ಇತರರು ಇದ್ದರು.