ಅರಸೀಕೆರೆ : ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನಪರ ಕೊಡುಗೆಗಳನ್ನು ಹೈಜಾಕ್ ಮಾಡುತ್ತಿರುವುದೇ ಶಾಸಕ ಕೆ.ಎಂ.ಶಿವಲಿಂಗೇಗೌಡ ಸಾಧನೆ ಎಂದು ಬಿಜೆಪಿ ಮುಖಂಡ ಎನ್.ಆರ್.ಸಂತೋಷ್ ಲೇವಡಿ ಮಾಡಿದರು.
ತಾಲೂಕಿನ ಹಿರಿಯೂರು ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ಮಹಿಳೆಯರಿಗೆ ಮಡಿಲು ತುಂಬುವ ಶಾಸ್ತ್ರದ ಬೃಹತ್ ಮಹಿಳಾ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ನಗರ ಹಾಗೂ ಗ್ರಾಮೀಣ ಭಾಗದ ಜನರ ಜಲದಾಹ ನೀಗಿಸಲು ಉಭಯ ಸರ್ಕಾರಗಳು ನಿರಂತರ ಶ್ರಮಿಸುತ್ತಿವೆ. ಇದಕ್ಕೆ ಪೂರಕ ಎನ್ನುವಂತೆ ಜಲ ಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ಗಂಗೆ ಹೆಸರಿನಲ್ಲಿ 220 ಕೋಟಿ ರೂ.ಗಳಿಗೂ ಹೆಚ್ಚಿನ ಅನುದಾನ ನೀಡುವ ಮೂಲಕ ಪ್ಲೋರೈಡ್ ಪೀಡಿತರ ನೆರವಿಗೆ ಧಾವಿಸಿದೆ.ಗ್ರಾಮೀಣ ಶುದ್ಧ ಕುಡಿಯುವ ನೀರು ಪೂರೈಕೆ ಮತ್ತು ನೈರ್ಮಲ್ಯ, ಜಿಲ್ಲಾ ಪಂಚಾಯಿತಿ ಸೇರಿ ಕೆಲ ಇಲಾಖೆಗಳ ಅಧಿಕಾರಿಗಳು ಶಾಸಕ ಕೆ.ಎಂ.ಶಿವಲಿಂಗೇಗೌಡ ಅಣತಿಯಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪೋಟೋ ಬಳಸದೇ ಕೊಡಗೆ ಮರೆಮಾಚಲು ಮುಂದಾಗಿದ್ದಾರೆ.ಗ್ರಾಮ ಪಂಚಾಯಿತಿ ಹಾಗೂ ರಾಜ್ಯ ಸರ್ಕಾರದ ಅನುದಾನವನ್ನು ನನ್ನದೇ ಎಂದು ಬಿಂಬಿಸಿಕೊಳ್ಳಲು ಹಾರೆ, ಗುದ್ದಲಿ, ಪಿಕಾಶಿ ಪೂಜೆ ನಡೆಯುತ್ತಿದೆ. ಡಬಲ್ ಇಂಜಿನ್ ಸರ್ಕಾರದ ಜನಪರ ಯೋಜನೆಗಳನ್ನು ಯಾವುದೇ ಕಾರಣಕ್ಕೂ ಹೈಜಾಕ್ ಮಾಡಲು ಬಿಡುವುದಿಲ್ಲ.ಬರಪೀಡಿತ ತಾಲೂಕಿಗೆ ಯಗಚಿ, ಹೇಮಾವತಿ ಶುದ್ಧ ಕುಡಿಯುವ ನೀರು ಹರಿಸಿದ ಸರ್ಕಾರ ಯಾವುದು ಎನ್ನುವ ನಾಗರಿಕರ ಪ್ರಶ್ನೆಗೆ ಉತ್ತರ ನೀಡಿ ಎಂದು ತಿರುಗೇಟು ನೀಡಿದರು.
ಜೇಬು ತುಂಬಿದೆ-ಅಭಿವೃದ್ಧಿಯೆಂದರೆ ಕೇವಲ ರಸ್ತೆಗಳಿಗೆ ಕಾಂಕ್ರೀಟ್ ಹಾಕುವುದಲ್ಲ ಎಂಬುದನ್ನು ಶಾಸಕರು ಇನ್ನಾದರೂ ಮನಗಾಣಬೇಕಿದೆ. ಶಿಕ್ಷಣ, ಆರೋಗ್ಯ ಸೇವೆ, ಯುವಕರಿಗೆ ಉದ್ಯೋಗ ನೀಡುವುದು ಸೇರಿ ಜನರ ಆದಾಯ ಹೆಚ್ಚಿಸುವ ಕೆಲಸ ಇದೂವರೆಗೂ ಮಾಡದಿರುವುದು ದುರದೃಷ್ಟಕರ.ಜಲ್ಲಿ, ಸಿಮೆಂಟ್ ಕೆಲಸದಿಂದ ಬೇನಾಮಿ ಗುತ್ತಿಗೆದಾರರ ಜೇಬು ತಂಬಿದೆಯೇ ವಿನಹಃ ಯಾರೊಬ್ಬರಿಗೂ ಪ್ರಯೋಜನವಾಗಿಲ್ಲ.ಕಾಂಕ್ರೀಟ್ ರಸ್ತೆ ಎತ್ತರವಾಗಿದ್ದು ಮನೆಗಳಿಗೆ ನೀರು ನುಗ್ಗಲು ಪ್ರಮುಖ ಕಾರಣವಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಿ. ಕ್ಷೇತ್ರದಲ್ಲಿ ಇದೀಗ ಸತತ 14 ವರ್ಷಗಳ ಬರ ನೀಗಿದ್ದು ಕೆರೆ, ಕಟ್ಟೆಗಳು ಸಂಪೂರ್ಣ ಭರ್ತಿಯಾಗಿವೆ. ಅನ್ನದಾತನ ಬದುಕು ಉತ್ತಮಗೊಳ್ಳುವ ಎಲ್ಲ ಲಕ್ಷಣಗಳು ಗೋಚರಿಸುತ್ತಿದ್ದು ಹಣ್ಣೆಲೆ ಉದುರಿ, ಚಿಗುರೆಲೆಗೆ ಅವಕಾಶ ದೊರೆಯಲಿ ಎಂದು ತಾಯಂದಿರಲ್ಲಿ ಪ್ರಾರ್ಥಸುತ್ತೇನೆ ಎಂದರು.
ಆಸ್ಪತ್ರೆ- ಹಿರಿಯೂರು ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ತೆರೆಯಬೇಕು ಎನ್ನುವ ಜನರ ನಿರೀಕ್ಷೆಗೆ ಪೂರಕವಾಗಿ ಕೆಲಸ ಮಾಡಲಿದ್ದೇನೆ.ಶೀಘ್ರವೇ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಜತೆ ಚರ್ಚಿಸಿ ಸೌಕರ್ಯ ಕಲ್ಪಿಸಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಡಾ.ರವಿ.ಬಸವರಾಜ್, ಶೈಲಾ, ಚಂದ್ರಣ್ಣ, ವೈ.ಕೆ.ದೇವರಾಜ್, ಉಮಾಶಂಕರ್ ಇತರರು ಇದ್ದರು