ಜಿಲ್ಲೆ

ಬಿಜೆಪಿ ಕಾಲದ ಹಗರಣಗಳ ತನಿಖೆಗೆ ಆಗ್ರಹ -ಕಮಿಷನ್ ಪಡೆದಿರುವ ದಾಖಲೆಗಳಿವೆ- ದಿನೇಶ್ ಶೆಟ್ಟಿ

ದಾವಣಗೆರೆ: ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಿಲ್ಲೆಯಲ್ಲಿ ಹಲವು ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿರುವ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಈ ಎಲ್ಲದರ ತನಿಖೆಗಾಗಿ ಜಿಲ್ಲಾ ಉಸ್ತುವಾರಿ ಸಚಿವರಲ್ಲಿ ಒತ್ತಾಯಿಸಲಾಗುವುದು ಎಂದು ತಿಳಿಸಿದರು.

ದಾವಣಗೆರೆಯಲ್ಲಿ ಎಸ್-ವೈ (ಸಿದ್ದೇಶ್ವರ- ಯಶವಂತರಾವ್ ಜಾಧವ್) ತೆರಿಗೆ ಜಾರಿಯಲ್ಲಿತ್ತು. ಸಂಸದರು ಹೇಳಿದಂತೆ ಅಧಿಕಾರಿಗಳು ಕಮಿಷನ್ ನೀಡಬೇಕಿತ್ತು. ಅದರಲ್ಲಿ ಶೇ 10ರಷ್ಟನ್ನು ಯಶವಂತರಾವ್ ಅವರಿಗೆ ನೀಡಬೇಕಿತ್ತು. ಕೆಲ ನಿವೃತ್ತರು, ವರ್ಗಾವಣೆಯಾದ ಅಧಿಕಾರಿಗಳು ನೀಡಿರುವ ಹೇಳಿಕೆಯ ದಾಖಲೆಗಳಿವೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಂದಿದ್ದ ಪೆನ್‌ಡ್ರೈವ್ ಅನ್ನು ಪ್ರದರ್ಶಿಸಿದರು.

ನಾವು ಹಣ ಪಡೆದಿಲ್ಲ ಎಂಬುದಾಗಿ ಸಂಸದರು ನಗರದೇವತೆ ದುರ್ಗಾಂಬಿಕಾ ದೇವಸ್ಥಾನದಲ್ಲಿ ಆಣೆ ಮಾಡಲಿ. ಇಲ್ಲವಾದಲ್ಲಿ ಅಲ್ಲಿಯೇ ಪೆನ್‌ಡ್ರೈವ್‌ನಲ್ಲಿನ ದಾಖಲೆ ಬಿಡುಗಡೆ ಮಾಡುವುದಾಗಿ ಹೇಳಿದರು.

ದಾವಣಗೆರೆಯಲ್ಲಿ 3.8 ಕೋಟಿ ರೂ. ವೆಚ್ಚದಲ್ಲಿ ಕುಂದುವಾಡ ಕೆರೆ ನಿರ್ಮಿಸಿ ಕೆರೆ ಅಭಿವೃದ್ಧಿ ಪಡಿಸಲಾಗಿತ್ತು. ಬಿಜೆಪಿ ಅವಧಿಯಲ್ಲಿ ಹೂಳು ತೆಗೆಸಲು 16 ಕೋಟಿ ರೂ. ಬಿಲ್ ಮಾಡಲಾಗಿದೆ. ಖಾಸಗಿ ಬಸ್ ನಿಲ್ದಾಣ, ಅಶೋಕ ಟಾಕೀಸ್ ಅಂಡರ್‌ಪಾಸ್, ಡಿಸಿಎಂ ಟೌನ್‌ಶಿಪ್ ಮೊದಲಾದ ಕಾಮಗಾರಿಗಳು ಅವೈಜ್ಞಾನಿಕವಾಗಿವೆ. ಬೇಲಿಕೇರಿ ಅದಿರು ಸಾಗಾಣಿಕೆಯಲ್ಲಿ ಸಂಸದರ ಸೋದರನೇ ಜೈಲಿಗೆ ಹೋಗಿ ಬಂದಿರುವ ಉದಾಹರಣೆ ಇವೆ ಎಂದು ತಿಳಿಸಿದರು.

ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಎಂಬುದಾಗಿ ಯಾರೂ ಹೇಳಿಕೆ ನೀಡದಂತೆ ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಸೂಚನೆ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಶಾಸಕ ಶಾಮನೂರು ಶಿವಶಂಕರಪ್ಪ ಈ ಬಗ್ಗೆ ನಿರ್ಧಾರ ಮಾಡುತ್ತಾರೆ ಎಂದು ತಿಳಿಸಿದರು.

ಅನಿತಾಬಾಯಿ ಮಾಲತೇಶ್, ಎ. ನಾಗರಾಜ್, ಕೆ.ಜಿ. ಶಿವಕುಮಾರ್, ರಾಜೇಶ್ವರಿ, ಅಯೂಬ್ ಪೈಲ್ವಾನ್, ನಂಜಾನಾಯ್ಕ, ದಾಕ್ಷಾಯಣಮ್ಮ, ಹರೀಶ್ ಎಲ್. ಬಸಾಪುರ, ಶುಭಮಂಗಳಾ ಸುದ್ದಿಗೋಷ್ಠಿಯಲ್ಲಿ ಇದ್ದರು.