ಬಾಗಲಕೋಟೆ: ಬಿಜೆಪಿ ಕಾರ್ಯಾಲಯಗಳು ದೇವಾಲಯ, ಸಂಸ್ಕಾರ ಕೇಂದ್ರಗಳಿದ್ದಂತೆ. ಸಮಸ್ಯೆ ಹೊತ್ತು ತರುವ ಜನತೆಗೆ ಇವುಗಳು ಪರಿಹಾರ ಕೇಂದ್ರಗಳಾಗಬೇಕು, ಬರುವ ಚುನಾವಣೆಯಲ್ಲಿ ಬಾಗಲಕೋಟೆ ಜಿಲ್ಲೆಯನ್ನೆ ಬಿಜೆಪಿ ಭದ್ರಕೋಟೆಯನ್ನಾಗಿಸುವ ಶಕ್ತಿ ಕೇಂದ್ರಗಳಾಗಿ ರೂಪಗೊಳ್ಳಬೇಕು ಎಂದು ಮಾಜಿ ಸಚಿವ, ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದರು.
ನವನಗರದಲ್ಲಿ ನೂತನ ಬಿಜೆಪಿ ಜಿಲ್ಲಾ ಕಚೇರಿ ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು. ಬಾಗಲಕೋಟೆ ಜಿಲ್ಲೆಯ ೭ ಸ್ಥಾನಗಳನ್ನು ಬಿಜೆಪಿ ಗೆಲ್ಲಿಸುವ ನಿಟ್ಟಿನಲ್ಲಿ ಕಾರ್ಯಕರ್ತರು, ಮುಖಂಡರು ಶಕ್ತಿಯುತ ಸಂಘಟನೆಗೆ ಶ್ರಮಿಸಬೇಕು ಎಂದರು.
ಸುಸಜ್ಜಿತವಾದ ಕಾರ್ಯಾಲಯ ನಿರ್ಮಾಣವಾಗುವ ಮೂಲಕ ಪಕ್ಷದ ಹಿರಿಯರ ಅಪೇಕ್ಷೆ, ಕಾರ್ಯಕರ್ತರ ಆಶಯ ಈಡೇರಿದೆ. ಪಕ್ಷಕ್ಕೆ ಚುನಾವಣೆ ಮಾತ್ರ ಗುರಿಯಲ್ಲ, ಅದು ಒಂದು ಕಾರ್ಯ, ಜೊತೆಗೆ ಸಮಸ್ಯೆ ಹೊತ್ತು ತರುವ ಜನತೆಯ ಪರಿಹಾರ ಕೇಂದ್ರವಾಗಬೇಕು, ಜನತೆಗೆ ಪಕ್ಷದ ಕಾರ್ಯಾಲಯದ ಮೇಲೆ ವಿಶ್ವಾಸ, ನಂಬಿಕೆ ಬರಬೇಕು, ಶಕ್ತಿಯುತ ಸಮಗ್ರ ದೇಶ ನಿರ್ಮಾಣದ ಸಂಸ್ಕಾರ ಕೇಂದ್ರವಾಗಬೇಕು, ಈ ನಿಟ್ಟಿನಲ್ಲಿ ಕಾರ್ಯಕರ್ತರು ಕಾರ್ಯೋನ್ಮುಖರಾಗಬೇಕು.ಬಿಜೆಪಿ ಪಕ್ಷದ ಸಂಸ್ಥಾಪಕರಾದ ಶ್ಯಾಮ ಮುಖರ್ಜಿ, ಉಪಾಧ್ಯ ಹಾಗೂ ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅಡ್ವಾಣಿ ಮತ್ತಿತರ ಪ್ರಮುಖರ ಅವಿರತ ಶ್ರಮದಿಂದ ಪಕ್ಷದ ಇಂದು ದೇಶದಲ್ಲಿ ಶಕ್ತಿಯುತವಾಗಿ ಬೆಳೆದಿದೆ. ಆಡಳಿತವನ್ನು ನಡೆಸುತ್ತಿದೆ. ಅವರ ಆದರ್ಶನಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ತೆಂಗಿನಕಾಯಿ ಮಾತನಾಡಿ, ಸುಸಜ್ಜಿತ ಕಾರ್ಯಾಲಯ ಪಕ್ಷದ ಸಂಘಟನೆಗೆ ವೇದಿಕೆಯಾಗುವ ಜೊತೆಗೆ ಚುನಾವಣೆಯನ್ನು ಸಮರ್ಥವಾಗಿ ಎದುರಿಸಿ ಗೆಲ್ಲುವ ನಿಟ್ಟಿನಲ್ಲಿ ಒಗ್ಗಟ್ಟಾಗಿ ಶ್ರಮಿಸಬೇಕು. ರಾಜ್ಯದ ಉಳಿದ ಎಲ್ಲ ಜಿಲ್ಲೆಗಳಲ್ಲಿ, ೩೧೨ ಮಂಡಳಗಳಲ್ಲಿ ಬರುವ ದಿನಗಳಲ್ಲಿ ಪಕ್ಷದ ಕಾರ್ಯಾಲಯ ಅಸ್ತಿತ್ವಕ್ಕೆ ಬರಲಿದೆ ಎಂದು ಸಂಘಟನೆಯ ಕುರಿತು ವಿವರಿಸಿದರು.
ಶಾಸಕ ಡಾ. ವೀರಣ್ಣ ಚರಂತಿಮಠ ಮಾತನಾಡಿ, ಈ ಹಿಂದೆ ಇದ್ದ ಸರ್ಕಾರ ಕಾಂಗ್ರೆಸ್‌ಗೆ ನವನಗರದಲ್ಲಿ ಜಾಗೆ ನೀಡಿದ ಆಧಾರದಂತೆ ತಾವು ೨೦೦೭ ರಲ್ಲಿ ಬಿಟಿಡಿಎ ಅಧ್ಯಕ್ಷನಾಗಿದ್ದ ವೇಳೆ ಬಿಜೆಪಿ ಪಕ್ಷದ ಕಟ್ಟಡ ನಿರ್ಮಾಣಕ್ಕೆ ನಿವೇಶನ ನೀಡಿದೆ. ಇಂದು ಬಹಳ ವರ್ಷಗಳ ನಂತರ ಪಕ್ಷಕ್ಕೆ ಸುಸಜ್ಜಿತ ಕಾರ್ಯಾಲಯ ನಿರ್ಮಾಣವಾಗುವ ಮೂಲಕ ಕಾರ್ಯಕರ್ತರ ಆಶಯ ಈಡೇರಿದೆ. ಪಕ್ಷಕ್ಕೆ ತನ್ನದೇ ಆದ ಕಟ್ಟಡ ಇರಲಿಲ್ಲ, ಶಿವಾನಂದ ಜಿನ್ ಪಕ್ಷದ ಕಚೇರಿಯಾಗಿ ಕಾರ್ಯ ನಿರ್ವಹಿಸಿತ್ತು ಎಂದು ಹಳೆಯ ನೆನಪುಗಳನ್ನು ಮೇಲಕು ಹಾಕಿದರು.
ಬಿಜೆಪಿ ಮುಖಂಡ, ಪ್ರಭುಲಿಂಗೇಶ್ವರ ಶುಗರ್ಸನ ಜಗದೀಶ ಗುಡಗುಂಟಿ ಕಾರ್ಯಾಲಯಕ್ಕೆ ೫ ಲಕ್ಷ ರೂ.ಗಳ ಚೆಕ್‌ನ್ನು ಇದೇ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಎಸ್.ಟಿ. ಪಾಟೀಲ ಅವರಿಗೆ ನೀಡಿದರು. ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ, ತೇರದಾಳದ ಶಾಸಕ ಸಿದ್ದು ಸವದಿ, ವಿಧಾನ ಪರಿಷತ್ ಮಾಜಿ ಸದಸ್ಯ ನಾರಾಯಣಸಾ ಭಾಂಡಗೆ, ಮಾಜಿ ಶಾಸಕರಾದ ಎಂ.ಕೆ.ಪಟ್ಟಣಶೆಟ್ಟಿ, ಮಲ್ಲಿಕಾರ್ಜುನ ಬನ್ನಿ, ರಾಜಶೇಖರ ಶೀಲವಂತ, ಮುಖಂಡರಾದ ಹೂವಪ್ಪ ರಾಠೋಡ, ಬಸವರಾಜ ಯಂಕಂಚಿ, ಅಶೋಕ ಜಿಗಳೂರ, ರಾಜು ನಾಯ್ಕರ, ರಾಜು ರೇವಣಕರ, ಸತ್ಯನಾರಾಯಣ ಹೇಮಾದ್ರಿ, ಮಲ್ಲಯ್ಯ ಮೂಗನೂರಮಠ, ರಾಜಶೇಖರ ಮುದೇನೂರ ಮತ್ತಿತರರು ಉಪಸ್ಥಿತರಿದ್ದರು.
ಕೋಟ್..
ಸುಜ್ಜಿತವಾದ ಕಟ್ಟಡ ಪಕ್ಷದ ಸಂಘಟನೆಗೆ ಶಕ್ತಿಯಾಗಲಿದೆ, ಬರುವ ಪ್ರತಿಯೊಂದು ಚುನಾವಣೆಯಲ್ಲಿ ಕಾರ್ಯಾಲಯವನ್ನು ಪಕ್ಷದ ಗೆಲ್ಲುವ ವೇದಿಕೆಯನ್ನಾಗಿ ಮಾರ್ಪಡಿಸಬೇಕು. ಕಾರ್ಯಕರ್ತರು ಇದರ ಸದುಪಯೋಗ ಪಡೆದುಕೊಳ್ಳಬೇಕು.
* ಪಿ.ಎಚ್.ಪೂಜಾರ ವಿಧಾನ ಪರಿಷತ್ ಸದಸ್ಯ
ಕೋಟ್..
ತಮ್ಮ ಅವಧಿಯಲ್ಲಿ ಕಾರ್ಯಾಲಯ ನಿರ್ಮಾಣವಾಗಿ ಉದ್ಘಾಟನೆಯಾಗಿರುವುದು ಹೆಮ್ಮೆಯಾಗಿದೆ. ಇದಕ್ಕೆ ಜಿಲ್ಲೆಯ ಸಚಿವರು, ಶಾಸಕರು, ಪಕ್ಷದ ಮುಖಂಡರು, ಕಾರ್ಯಕರ್ತರು ಎಲ್ಲರೂ ನೆರವಾಗಿದ್ದಾರೆ. ಬರುವ ಚುನಾವಣೆಯಲ್ಲಿ ಪಕ್ಷಕ್ಕೆ ಗೆಲುವು ತಂದುಕೊಡಲು ಕಾರ್ಯಕರ್ತರು ಸನ್ನದ್ಧರಾಗಿದ್ದಾರೆ. ಅದಕ್ಕೆ ಪಕ್ಷದ ಮುಖಂಡರು ಮಾರ್ಗದರ್ಶನ ಮಾಡಬೇಕು.
* ಶಾಂತಗೌಡ ಪಾಟೀಲ ಬಿಜೆಪಿ ಜಿಲ್ಲಾಧ್ಯಕ್ಷ