ತಿಪಟೂರು: ರಾಜ್ಯದ ಎಂಟು ಜಿಲ್ಲೆ ಮತ್ತು ತಿಪಟೂರು ತಾಲೂಕು ಮಂಡಳ ಸೇರಿ ಒಟ್ಟು 9 ಕಡೆ ಶುಕ್ರವಾರ ಬೆಳಗ್ಗೆ 7.45ಕ್ಕೆ ಏಕಕಾಲಕ್ಕೆ ಬಿಜೆಪಿ ಸ್ವಂತ ಕಾರ್ಯಾಲಯಗಳ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿತು.
ನಗರದ ಶ್ರೀ ರೇಣುಕ ಮಂದಿರದ ಪಕ್ಕದ ನಿವೇಶನದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ತಾಲೂಕು ಮಟ್ಟದ ಬಿಜೆಪಿ ಕಾರ್ಯಾಲಯ ಶಿಲಾನ್ಯಾಸ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಹೋಮ ಮತ್ತು ಭೂಮಿ ಪೂಜೆ ನಡೆಯಿತು.
ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ, ಮಾಜಿ ಸಚಿವ ಸೊಗಡು ಶಿವಣ್ಣ, ತಾಲೂಕು ಅಧ್ಯಕ್ಷ ಸುರೇಶ್, ನಗರಾಧ್ಯಕ್ಷ ಗುಲಾಬಿ ಸುರೇಶ್, ನಗರಸಭಾ ಸದಸ್ಯರಾದ ರಾಮ ಮೋಹನ್ ಸೇರಿ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು. ಪಕ್ಷದ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರಿಂದ ಏಕಕಾಲಕ್ಕೆ 8 ಜಿಲ್ಲೆ ಹಾಗೂ ತಿಪಟೂರು ತಾಲೂಕು ಮಂಡಳದ ಶಿಲಾನ್ಯಾಸ ಉದ್ಘಾಟನೆ ವೀಕ್ಷಿಸಲು ನಗರದ ಗುರುಲೀಲ ಕಲ್ಯಾಣ ಮಂಟಪದಲ್ಲಿ ನೇರ ವಿಡಿಯೋ ಕಾನ್ಫರೆನ್ಸ್ ಏರ್ಪಡಿಸಲಾಗಿತ್ತು. ಸಂಸದ ಜಿ.ಎಸ್.ಬಸವರಾಜು, ಕಾರ್ಯಕರ್ತರು ಭಾಗವಹಿಸಿದ್ದರು.
ಬಿಜೆಪಿ ಕಾರ್ಯಾಲಯವು ರಾಜಕೀಯ, ರಾಜನೀತಿ ಕಲಿಸುವ ಮತ್ತು ಸಂಸ್ಕಾರ ಕಲಿಸುವ ದೇವಾಲಯವಿದ್ದಂತೆ ಎಂದು ಶಾಸಕ ಬಿ.ಸಿ.ನಾಗೇಶ್ ಹೇಳಿದರು. ಇದೇ ಮೊದಲ ಬಾರಿಗೆ ಜಿಲ್ಲಾ ಕೇಂದ್ರ ಹೊರತುಪಡಿಸಿ, ತಾಲೂಕು ಮಂಡಳದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ಪಕ್ಷದ ಹಿರಿಯರು ಮನ್ನಣೆ ಕೊಟ್ಟಿರುವುದು ಮಾದರಿ ವಿಷಯ, ಈ ನಂಬಿಕೆ ಉಳಿಸಿಕೊಂಡು ಇನ್ನೊಂದು ವರ್ಷದಲ್ಲಿ ಸುಸಜ್ಜಿತ ಕಟ್ಟಡವನ್ನು ಕಾರ್ಯಕರ್ತರಿಗೆ ಸಮರ್ಪಿಸಲಾಗುವುದು. ವಿಶಾಲವಾದ ಸಭಾಂಗಣ, ಕಂಪ್ಯೂಟರ್ ಕೊಠಡಿ, ಗ್ರಂಥಾಲಯ, ಆಸನಗಳ ವ್ಯವಸ್ಥೆ ಇರುತ್ತೆ ಎಂದರು.
ಕಾರ್ಯಕರ್ತರಾದ ಪರಪ್ಪ, ಸುದರ್ಶನ್, ಶಿವಲಿಂಗಪ್ಪ ಸೇರಿ ಅನೇಕರು ಕಟ್ಟಡ ನಿರ್ಮಾಣಕ್ಕೆ ಧನ ಸಹಾಯ ಘೋಷಿಸಿದರು. ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಗಂಗರಾಜು, ಜಿಲ್ಲಾ ಕಾರ್ಯದರ್ಶಿ ಬಿಸಲೇಹಳ್ಳಿ ಜಗದೀಶ್, ತಾಲೂಕು ಅಧ್ಯಕ್ಷ ಸುರೇಶ್, ನಗರಾಧ್ಯಕ್ಷ ಗುಲಾಬಿ ಸುರೇಶ್, ನಗರಸಭಾ ಮಾಜಿ ಹಿರಿಯ ಸದಸ್ಯ ಪ್ರಸನ್ನ ಕುಮಾರ್, ಸದಸ್ಯರಾದ ರಾಮಮೋಹನ್, ಡಾ.ಓಹಿಲಾ ತರಕಾರಿ ಗಂಗಾಧರ್, ಮುಖಂಡ ಸಿಂಗ್ರಿ ದತ್ತ ಪ್ರಸಾದ್ ಇದ್ದರು.
ಅಮಿತ್ ಷಾ ಬಯಸಿದಂತೆ ಪಕ್ಷದ ಕಾರ್ಯಕರ್ತರನ್ನು ಒಗ್ಗೂಡಿಸಿ, ಒಂದು ಮಾಡುವ ಜತೆಗೆ ಸಂಸ್ಕಾರ ಕಲಿಸುವ ನಿಟ್ಟಿನಲ್ಲಿ ಪಕ್ಷಕ್ಕೆ ಸ್ವಂತ ಕಟ್ಟಡಗಳ ಅವಶ್ಯಕತೆ ಕುರಿತ ಕನಸು ಸಾಕಾರಗೊಂಡಿದೆ. 30 ಜಿಲ್ಲೆಗಳ ಪೈಕಿ 11 ಜಿಲ್ಲೆಗಳಲ್ಲಿ ಸ್ವಂತ ಕಟ್ಟಡಗಳಿದ್ದು, ಉಳಿದ ಜಿಲ್ಲೆಗಳಲ್ಲಿ ಪ್ರಕೃತಿ ವಿಕೋಪ ಶಮನವಾದ ನಂತರ ಕಟ್ಟಡ ನಿರ್ಮಾಣ ಕೈಗೆತ್ತಿಕೊಳ್ಳುವ ಉದ್ದೇಶ ಪಕ್ಷದ್ದಾಗಿದೆ. ಬಿ.ಸಿ.ನಾಗೇಶ್ ಶಾಸಕ