ಜಿಲ್ಲೆ

ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ

ಮೈಸೂರು: ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸ್ ಆಯುಕ್ತರ ಅಮಾನತು ಮಾಡಿರುವ ರಾಜ್ಯ ಸರ್ಕಾರದ ನಿಲುವು ಖಂಡಿಸಿ ಬಿಜೆಪಿ ಕಾರ್ಯಕರ್ತರು  ಪ್ರತಿಭಟನೆ ನಡೆಸಿದರು.

ನಗರದ ರಾಮಸ್ವಾಮಿ ವೃತ್ತದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು, ರಾಜ್ಯ ಸರ್ಕಾರ, ಸಿಎ, ಡಿಸಿಎಂ, ಗೃಹ ಸಚಿವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಆರ್‌ಸಿಬಿ ವಿಜಯೋತ್ಸವ ಸಂದರ್ಭದಲ್ಲಿ ಸಂಭವಿಸಿದ 11 ಜನರ ಸಾವಿಗೆ ಕಾಂಗ್ರೆಸ್ ಕಾರಣ. ರೀಲ್ಸ್‌ಗಾಗಿ ಇವರನ್ನು ಕಾಂಗ್ರೆಸ್ ಬಲಿ ಪಡೆದಿದೆ ಎಂದು ಹರಿಹಾಯ್ದರು. ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, ರಾಜ್ಯ ಸರ್ಕಾರ ಕಾಲ್ತುಳಿತ ಪ್ರಕರಣದಂತೆ ಮುಡಾ ಹಗರಣದಲ್ಲಿ ಅಧಿಕಾರಿಗಳ ವಿರುದ್ಧ ಏಕೆ ಕ್ರಮ ಕೈಗೊಂಡಿಲ್ಲ? ಸಿಎಂ ಸಿದ್ದರಾಮಯ್ಯ ಅವರು ಲಾಭ ಹಾಗೂ ಅನುಕೂಲಕ್ಕೆ ತಕ್ಕಂತೆ ಅಧಿಕಾರ ದುರ್ಬಳಕೆ ಮಾಡ್ತಿದ್ದಾರೆ.

ವಿಧಾನಸೌಧದ ಬಳಿ ಆರ್‌ಸಿಬಿ ಆಟಗಾರರಿಗೆ ಸನ್ಮಾನಿಸುವ ಕಾರ್ಯಕ್ರಮ ಮಾಡಲು ಅನುಮತಿ ಕೊಟ್ಟವರು ಯಾರು? ಇದಕ್ಕೆಲ್ಲ ನೇರ ಹೊಣೆ ಸಿಎಂ ಹಾಗೂ ಡಿಸಿಎಂ ಆಗಿದ್ದು, ತಮ್ಮ ತಪ್ಪು ಮುಚ್ಚಿಕೊಳ್ಳಲು ಪೊಲೀಸ್ ಇಲಾಖೆಯನ್ನೇ ಬಲಿ ಪಶು ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಪಕ್ಷದ ನಗರಾಧ್ಯಕ್ಷ ಎಲ್.ನಾಗೇಂದ್ರ ಮಾತನಾಡಿ, ಬೆಂಗಳೂರಿನಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣ ಸಂಬಂಧ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿರುವುದು ಸರಿಯಲ್ಲ. ಇದು ಕೋತಿ ತಿಂದು ಮೇಕೆ ಬಾಯಿಗೆ ಒರೆಸಿದಂತಾಗಿದೆ ಎಂದು ಟೀಕಿಸಿದರು.

ಸಿಎಂ, ಡಿಸಿಎಂ, ಸಚಿವರ ಮಕ್ಕಳು, ಮೊಮ್ಮಕ್ಕಳು ಸೆಲ್ಫಿ ತೆಗೆದುಕೊಳ್ಳಲು ಆರ್‌ಸಿಬಿ ತಂಡವನ್ನು ವಿಧಾನಸೌಧದ ಮುಂಭಾಗಕ್ಕೆ ಕರೆಸಿಕೊಂಡಿದ್ದಾರೆ. ಇವರ ಕುಟುಂಬ ಸದಸ್ಯರ ಸೆಲ್ಫಿ ಗೀಳಿನಿಂದ ಅಮಾಯಕರು ಬಲಿಯಾಗಿದ್ದಾರೆ. 11 ಆರ್‌ಸಿಬಿ ಅಭಿಮಾನಿಗಳ ಸಾವಿಗೆ ರಾಜ್ಯ ಸರ್ಕಾರವೇ ನೇರ ಹೊಣೆ ಎಂದು ಹರಿಹಾಯ್ದರು.

ಮುಖಂಡರಾದ ಆರ್.ರಘು, ಬಿ.ವಿ.ಮಂಜುನಾಥ, ಮಂಜುಳಾ ಸೋಮಶೇಖರ್, ಪ್ರಭಾಕರ್ ಶಿಂಧೆ, ಜೋಗಿ ಮಂಜು, ಶೈಲೇಂದ್ರ ಇತರರಿದ್ದರು.