ಜಿಲ್ಲೆ

ಬಿಜೆಪಿ ಕಾರ್ಯಕರ್ತರಿಂದ ಪಟ್ಟಣ ಪಂಚಾಯಿತಿಗೆ ಮುತ್ತಿಗೆ

ಸೋಮವಾರಪೇಟೆ: ಪಟ್ಟಣದ ಹೊಸ ಬಡಾವಣೆಯಲ್ಲಿ ಭಾನುವಾರ ನಿರ್ಮಾಣ ಮಾಡಿರುವ ಶೆಡ್ ತೆರವುಗೊಳಿಸದಂತೆ ಆಗ್ರಹಿಸಿ ಕೆಲ ಬಿಜೆಪಿ ಕಾರ್ಯಕರ್ತರು ಹಾಗೂ ಸ್ಥಳೀಯರು ಮಂಗಳವಾರ ಪಟ್ಟಣ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಮುಖ್ಯಾಧಿಕಾರಿ ಸತೀಶ್ ಕಚೇರಿಗೆ ತೆರಳಿದ ಪ್ರತಿಭಟನಾಕಾರರು ಅಧಿಕಾರಿಯೊಂದಿಗೆ ಮಾತಿನ ಚಕಮಕಿ ನಡೆಸಿದರು. ಪಂಚಾಯಿತಿಗೆ ಸೇರಿದ ಜಾಗದಲ್ಲಿ ಶೆಡ್ ಕಟ್ಟಿರುವುದು ಸರಿಯಲ್ಲ. ಕೂಡಲೆ ಶೆಡ್‌ನ್ನು ನೀವೇ ತೆರವುಗೊಳಿಸಬೇಕೆಂದು ಮುಖ್ಯಾಧಿಕಾರಿ ಸೂಚಿಸಿದರು.

ಗೌರಿ-ಗಣೇಶ ಹಬ್ಬದ ದಿನ ಗೌರಿ-ಗಣೇಶ ಮೂರ್ತಿಗಳನ್ನು ಪೂಜಿಸಿ, ವಿಸರ್ಜನೆಯ ನಂತರ ಸ್ಥಳವನ್ನು ಸರಿಪಡಿಸಿಕೊಟ್ಟರೆ ಪಂಚಾಯಿತಿಯಿಂದ ಯಾವುದೇ ತಕರಾರು ಇಲ್ಲ. ಪಂಚಾಯಿತಿ ಅನುಮತಿಯಿಲ್ಲದೆ ಏಕಾಏಕಿ ಈ ಸಮಯದಲ್ಲಿ ಶೆಡ್ ನಿರ್ಮಿಸಿ, ಕಾಂಕ್ರೀಟ್ ಹಾಕಿರುವ ಉದ್ದೇಶವಾದರೂ ಏನೂ? ಕೂಡಲೆ ಶೆಡ್ ತೆರವುಗೊಳಿಸಬೇಕು ಎಂದು ಪಂಚಾಯಿತಿ ಅಧ್ಯಕ್ಷರಾದ ಜಯಂತಿ ಶಿವಕುಮಾರ್ ಹೇಳಿದರು.

ಆ ಸ್ಥಳದಲ್ಲಿ ಗೌರಿ-ಗಣೇಶ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲು ಈ ಹಿಂದೆ ಪಂಚಾಯಿತಿ ಆಡಳಿತ ಮಂಡಳಿ ಅನುಮತಿ ನೀಡಿದೆ ಎಂದು ಬಿಜೆಪಿಯ ಎಸ್.ಆರ್.ಸೋಮೇಶ್ ವಾದಿಸಿದರು. ಅಲ್ಲಿ ಪರ್ಮನೆಂಟ್ ಶೆಡ್ ನಿರ್ಮಿಸಿಲ್ಲ ಎಂದು ಶರತ್‌ಚಂದ್ರ ಹೇಳಿದರು. ಪೊಲೀಸ್ ಠಾಣೆಗೆ ದೂರು ನೀಡಿರುವ ಬಗ್ಗೆ ಮೋಹನ್ ಅಸಮಾಧಾನ ವ್ಯಕ್ತಪಡಿಸಿದರು. ನಿಮ್ಮನ್ನು ಪಂಚಾಯಿತಿಗೆ ಬಂದು ಶೆಡ್ ನಿರ್ಮಿಸಿರುವುದಕ್ಕೆ ಸಮಾಜಾಯಿಷಿ ನೀಡಲು ಕರೆ ಮಾಡಲಾಗಿತ್ತು, ನೀವು ಬರಲಿಲ್ಲ. ಪಂಚಾಯಿತಿ ಆಸ್ತಿಗೆ ಹಾನಿಯಾದಾಗ ಪೊಲೀಸ್ ಠಾಣೆಗೆ ದೂರು ನೀಡುವುದು ಪಂಚಾಯಿತಿ ಆಡಳಿತದ ನಿಯಮ ಎಂದು ಮುಖ್ಯಾಧಿಕಾರಿ ಹೇಳಿದರು.

ಪಟ್ಟಣ ವ್ಯಾಪ್ತಿಯಲ್ಲಿ ಅನೇಕರು ಚರಂಡಿ ಮೇಲೆ ಮನೆ ನಿರ್ಮಿಸಿಕೊಂಡಿದ್ದಾರೆ. ಅದನ್ನು ಮೊದಲು ತೆಗೆಸಿ ಎಂದು ಶರತ್‌ಚಂದ್ರ ಮುಖ್ಯಾಧಿಕಾರಿಗೆ ಹೇಳಿದರು. ಮುಂದಿನ ಶುಕ್ರವಾರ ಪಂಚಾಯಿತಿ ಸದಸ್ಯರ ಸಭೆ ಕರೆದು ಈ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿದ ನಂತರ ಪ್ರತಿಭಟನೆ ಕೈಬಿಟ್ಟು ಪ್ರತಿಭಟನಾಕಾರರು ತೆರಳಿದರು.