ಜಿಲ್ಲೆ

ಬಿಜೆಪಿ ಕಾರ್ಯಕರ್ತರ ಸಭೆ ಇಂದು

ಹುಕ್ಕೇರಿ: ರಾಜಕೀಯ ಮತ್ತು ಸಹಕಾರಿ ಕ್ಷೇತ್ರದಲ್ಲಿ ಆಗಿರುವ ಬದಲಾವಣೆಯ ಆತ್ಮಾವಲೋಕನ ಮತ್ತು ಮುಂದೆ ಕೈಗೊಳ್ಳಬೇಕಾದ ರಾಜಕೀಯ ನಡೆ ಕುರಿತು ಜು.೧೮ರಂದು ಸ್ಥಳೀಯ ವಿಶ್ವರಾಜ ಸಭಾಭವನದಲ್ಲಿ ಬೆಳಗ್ಗೆ ೧೧ ಗಂಟೆಗೆ ಬಿಜೆಪಿ ಕಾರ್ಯಕರ್ತರು, ಮುಖಂಡರ ಸಭೆ ಕರೆಯಲಾಗಿದೆ ಎಂದು ಮಾಜಿ ಸಂಸದ ರಮೇಶ ಕತ್ತಿ ಹೇಳಿದರು.

ಪಟ್ಟಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಹಕಾರಿ ಕ್ಷೇತ್ರದಲ್ಲಿ ಅವಿರೋಧವಾಗಿ ಆಯ್ಕೆ ಮಾಡಿದ್ದ ಕೆಲವರು ನಮ್ಮನ್ನು ತೊರೆದು ಹೋಗಿರುವ ಕುರಿತು ಚರ್ಚಿಸಲಾಗುವುದು. ಕಾರ್ಯಕರ್ತರು, ಮುಖಂಡರು ಮುಕ್ತವಾಗಿ ಅಭಿಪ್ರಾಯ ತಿಳಿಸಿದ ಬಳಿಕ ಮುಂದಿನ ರಾಜಕೀಯ ಹಾಗೂ ಸಹಕಾರಿ ಕ್ಷೇತ್ರದ ಭವಿಷ್ಯ ನಿರ್ಧರಿಸುತ್ತೇವೆ ಎಂದರು.

ನಮ್ಮೊಂದಿಗೆ ಮತದಾರರು: ನಮ್ಮವರು ಎನಿಸಿಕೊಂಡವರು ವಿಶ್ವಾಸಕ್ಕೆ ಮೋಸ ಮಾಡಿದಾಗ ಸಂಸ್ಥಾನಗಳು, ಸಂಘ-ಸಂಸ್ಥೆಗಳು ಹಾಳಾಗಿವೆ. ಅದೇ ತೆರನಾಗಿ ಹುಕ್ಕೇರಿ ತಾಲೂಕಿನ ರಾಜಕೀಯ, ಸಹಕಾರಿ ಕ್ಷೇತ್ರದಲ್ಲಿ ಆಗಿದೆ. ನಿರ್ದೇಶಕರು ನಮ್ಮನ್ನು ಬಿಟ್ಟು ಹೋಗಿರಬಹುದು. ಆದರೆ, ಮತದಾರರು ಜತೆಗಿದ್ದಾರೆ. ಇನ್ಮುಂದೆ ಮತದಾರರು ಮತ್ತು ನಮ್ಮನ್ನು ರಾಜಕೀಯವಾಗಿ ಬೆಳೆಸಿದವರೊಂದಿಗೆ ಚರ್ಚಿಸಿ ಮುಂದಿನ ಹೆಜ್ಜೆ ಇಡುತ್ತೇವೆ. ಸಹಕಾರಿ ಚುನಾವಣೆಗೆ ಎಲ್ಲರ ಇಚ್ಛೆಯ ಅಭ್ಯರ್ಥಿಗಳನ್ನು ನಿಲ್ಲಿಸಲಾಗುವುದು. ಶಾಸಕ ನಿಖಿಲ ಕತ್ತಿ ಶಾಸಕರಾಗಿ ಆಯ್ಕೆಯಾಗಿ ಎರಡು ವರ್ಷ ಸಂದ ಪ್ರಯುಕ್ತ ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಗಳ ಕುರಿತು ಸಭೆಯಲ್ಲಿ ಚರ್ಚಿಸುತ್ತೇವೆ ಎಂದರು.

ಮುಖಂಡರಾದ ಸತ್ತೆಪ್ಪ ನಾಯಿಕ, ಸುನೀಲ ನೇರ್ಲಿ, ಮಹಾವೀರ ನಿಲಜಗಿ, ಎ.ಕೆ.ಪಾಟೀಲ, ಗುರು ಕುಲಕರ್ಣಿ, ಪ್ರಕಾಶ ಮುತಾಲಿಕ, ತಮ್ಮಣ್ಣ ಕರಗುಪ್ಪಿ, ರಾಜೇಶ ಬಿರಾದಾರಪಾಟೀಲ, ಎಚ್.ಎಲ್.ಪೂಜೇರಿ, ಎಸ್.ಆರ್.ಕರ್ಕಿನಾಯಿಕ, ಬಸಗೌಡ ಪಾಟೀಲ ಇತರರು ಇದ್ದರು.