ಜಿಲ್ಲೆ

ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ

ತಿ.ನರಸೀಪುರ: ಮುಖ್ಯಮಂತ್ರಿ ವಿಶೇಷ ಅನುದಾನ 4.75 ಕೋಟಿ ರೂ.ವೆಚ್ಚದಲ್ಲಿ ಪಟ್ಟಣದಲ್ಲಿ ನಡೆಯುತ್ತಿರುವ ರಸ್ತೆಗಳ ಡಾಂಬರು ಕಾಮಗಾರಿ ಕಳಪೆಯಾಗಿದೆೆ ಎಂದು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಪಟ್ಟಣದ ಅಂಚೆ ಕಚೇರಿ ಮುಂಭಾಗ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು, ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ರಮೇಶ್ ಮಾತನಾಡಿ, ತಿ.ನರಸೀಪುರ ಪಟ್ಟಣ ಹಾಗೂ ವರುಣ ಎರಡು ಕ್ಷೇತ್ರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಾ.ಎಚ್.ಸಿ.ಮಹದೇವಪ್ಪ ಅವರ ಕ್ಷೇತ್ರವಾಗಿದೆ. ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಚರಂಡಿ ಹಾಗೂ ರಸ್ತೆ ಅಭಿವೃದ್ಧಿಗೆ ವಿಶೇಷ ಅನುದಾನದಲ್ಲಿ ಕೆಲಸ ಪ್ರಾರಂಭವಾಗಿದೆ. ಅದರೆ ಇಲ್ಲಿನ ಇಂಜಿನಿಯರ್ ಹಾಗೂ ಟೆಂಡರ್‌ದಾರ ಗುಣಮಟ್ಟದ ರಸ್ತೆ ಅಭಿವೃದ್ಧಿ ಪಡಿಸದೇ ಮೂರೇ ದಿನಕ್ಕೆ ಡಾಂಬರು ಕಿತ್ತುಹೋಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಡ್ಲೇರಂಗಮ್ಮನ ಬೀದಿ, ನಂಜನಗೂಡು ರಸ್ತೆ, ಪೌರಕಾರ್ಮಿಕ ಬೀದಿ, ಮಸೀದಿ ಬೀದಿ ಹಾಗೂ ಗೋಪಾಲಪುರ ಸೇರಿದಂತೆ ಹಿಂದುಳಿದ ವರ್ಗ ಜನರು ವಾಸಿಸುವ ಕಾಲನಿಗಳಲ್ಲಿ ಮೊದಲು ಚರಂಡಿ ನಿರ್ಮಾಣ ಮಾಡಿ ನಂತರ ಡಾಂಬರು ರಸ್ತೆ ಮಾಡಬೇಕು, ಆದರೆ ಕಳಪೆ ರಸ್ತೆಗಳನ್ನು ನಿರ್ಮಾಣ ಮಾಡಿ ಮುಗಿಸಿದ್ದಾರೆ. ಇದರ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಉಸ್ತುವಾರಿ ಸಚಿವರು ಗಮನಹರಿಸಿ ಉತ್ತಮ ರಸ್ತೆಗಳನ್ನು ಅಭಿವೃದ್ಧಿಗೆ ಅಧಿಕಾರಿಗಳಿಗೆ ಸೂಚನೆ ನೀಡಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಹಾಗೂ ಸೂಕ್ತ ತನಿಖೆಗೆ ಒತ್ತಾಯಿಸಲಾಗುವುದು ಎಂದು ಎಚ್ಚರಿಸಿದರು.

ಪುರಸಭೆ ಇಂಜಿನಿಯರ್ ವರ್ಗಾವಣೆಗೊಂಡಿದ್ದರೂ ಹೊಸದಾಗಿ ಆಗಮಿಸಿರುವ ಇಂಜಿನಿಯರ್‌ಗೆ ಅಧಿಕಾರ ಹಸ್ತಾಂತರಿಸದೆ ಇರುವುದು ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಪುರಸಭೆ ಸದಸ್ಯ ಎಸ್.ಕೆ.ಕಿರಣ್, ಬಿಜೆಪಿ ಟೌನ್ ಅಧ್ಯಕ್ಷ ಕೆ.ನಂಜುಂಡಸ್ವಾಮಿ, ಮಾಜಿ ನಾಮ ನಿರ್ದೇಶಕ ಸದಸ್ಯ ಲೋಕೇಶ್, ರಾಜಶೇಖರ್, ಸಿದ್ದರಾಜು, ದೀಪು ಮತ್ತಿತರರು ಭಾಗವಹಿಸಿದ್ದರು.