ಜಿಲ್ಲೆ

ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನಾಯಕರಿಗೆ ಹಸಿರು ಟವಲ್ ಹಾಕಿಕೊಳ್ಳುವ ಯೋಗ್ಯತೆ ಇಲ್ಲ

ಮೈಸೂರು: ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನಾಯಕರಿಗೆ ಹಸಿರು ಟವಲ್ ಹಾಕಿಕೊಳ್ಳಲು ಯೋಗ್ಯತೆ ಇಲ್ಲ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಶಾಲಿನ ಪೇಟೆಂಟ್ ತೆಗೆದುಕೊಂಡವರಂತೆ ತಮ್ಮದಾಗಿಸಿಕೊಂಡಿದ್ದಾರೆ. ರೈತರು ಇದರ ಯೋಗ್ಯತೆ ಉಳಿಸುವ ಕೆಲಸ ಮಾಡಬೇಕು ಎಂದು ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿದರು.

ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಪುರಭವನದಲ್ಲಿ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ಪ್ರೊ.ಎಂ.ಡಿ.ನಂಜುಂಡಸ್ವಾಮಿ-89 ನೆನಪು ಮತ್ತು ಜಿಲ್ಲಾ ರೈತ ಸಮಾವೇಶದಲ್ಲಿ ಮಾತನಾಡಿದರು

ಅಧಿಕಾರಿಗಳಿಗೆ ಕೊಡಬೇಕಾದ ಲಂಚದಿಂದ ತಪ್ಪಿಸಿಕೊಳ್ಳಲು ಹಸಿರು ಟವೆಲ್ ಹಾಕಿಕೊಳ್ಳುವುದು ತಪ್ಪಲ್ಲ. ಆದರೆ, ಮರಳುದಂಧೆ, ವ್ಯವಹಾರ ಕುದುರಿಸಲು, ಕೋಮುವಾದಿಗಳ ಪರವಾಗಿರುವವರು ಈ ಶಾಲು ಬಳಸಿದರೆ ಸಹಿಸಲಾಗದು ಎಂದು ಗುಡುಗಿದರು.

ಕೃಷಿ ವಿರೋಧಿ ಮೂರು ಕಾಯ್ದೆಗಳನ್ನು ರಾಜ್ಯ ಸರ್ಕಾರ ವಾಪಸ್ ಪಡೆದಿಲ್ಲ. ಹೀಗಾಗಿ, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 100 ಕ್ಷೇತ್ರಗಳಲ್ಲಿ ಸರ್ವೋದಯ ಕರ್ನಾಟಕ ಸ್ಪರ್ಧಿಸಲಿದೆ ಎಂದು ತಿಳಿಸಿದರು

ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಪಂಚೇಂದ್ರಿಯಗಳೇ ಇಲ್ಲ. ದೂರ ದೃಷ್ಟಿಯೂ ಇಲ್ಲ. ಜೀತದಾಳು ರೀತಿಯಲ್ಲಿ ರೈತರನ್ನು ಬಳಸಿಕೊಳ್ಳುತ್ತಿವೆ. ಕಾರ್ಪೋರೇಟ್ ಕಂಪನಿಗಳ ಪರ ಕೆಲಸ ಮಾಡುತ್ತಿವೆ ಎಂದು ದೂರಿದರು.