ಜಿಲ್ಲೆ

ಬಿಜೆಪಿ ಕಡೆಗಣಿಸಿದಕ್ಕೆ ನಾಗೇಶ್‌ಗೆ ಮಂತ್ರಿ ಪದವಿ ಹೋಯಿತು

Kolar

ಮುಳಬಾಗಿಲು: ಶಾಸಕ ಎಚ್.ನಾಗೇಶ್ ಅವರು ಮುಳಬಾಗಿಲು ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆಯಾಗಿ ಬಿಜೆಪಿ ಸರ್ಕಾರಕ್ಕೆ ಬೆಂಬಲ ವ್ಯಕ್ತಪಡಿಸಿದ ಕಾರಣ ಯಡಿಯೂರಪ್ಪ ಅವರ ಸಂಪುಟದಲ್ಲಿ ಅಬಕಾರಿ ಖಾತೆ ನೀಡಿ ಕೋಲಾರ ಉಸ್ತುವಾರಿ ನೀಡಲಾಗಿತ್ತು, ಆದರೆ ಅವರು ಬಿಜೆಪಿ ಕಡೆಗಣಿಸಿದ ಪರಿಣಾಮ ಅಧಿಕಾರ ಕಳೆದುಕೊಂಡರು. ಇದರಲ್ಲಿ ಬಿಜೆಪಿ ಲೋಪವಾಗಿಲ್ಲ ಎಂದು ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಹೇಳಿದರು.

ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಘಟಕದಿಂದ ಹಮ್ಮಿಕೊಳ್ಳಲಾದ ರಾಜ್ಯದ 36 ಮೀಸಲು ಕ್ಷೇತ್ರಗಳಿಗೆ ಪ್ರವಾಸ ಕಾರ್ಯಕ್ರಮದ ಅಂಗವಾಗಿ ಬುಧವಾರ ಮುಳಬಾಗಿಲಿಗೆ ಭೇಟಿ ನೀಡಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಒಂದು ಪಕ್ಷದಲ್ಲಿ ಅಧಿಕಾರಕ್ಕೆ ಬಂದರೆ ಆ ಪಕ್ಷದ ಏಳಿಗೆ ಮತ್ತು ಆ ಪಕ್ಷದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕಾರ್ಯ ನಡೆಯಬೇಕು. ಆದರೆ ಇಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಶಾಸಕರಿಂದ ಯಾವುದೇ ಸ್ಪಂದನೆ ಸಿಗುತ್ತಿಲ್ಲ. ಆದ್ದರಿಂದ ಅವರ ಅಧಿಕಾರವನ್ನು ಅವರೇ ಕಳೆದುಕೊಂಡರು ಎಂದು ಶಾಸಕರ ಮಂತ್ರಿ ಪದವಿ ಬಗ್ಗೆ ಪ್ರತಿಕ್ರಿಯಿಸಿದರು.

ರಾಜ್ಯದಲ್ಲಿ 36 ಮೀಸಲು ಕ್ಷೇತ್ರಗಳಲ್ಲಿ ಪ್ರವಾಸ ಕೈಗೊಂಡು ವಿಶೇಷವಾಗಿ ದಲಿತ ಸಮುದಾಯವನ್ನು ಪೂರ್ಣ ಪ್ರಮಾಣದಲ್ಲಿ ಬಿಜೆಪಿಗೆ ಕರೆತರುವ ಮೂಲಕ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 36 ಮೀಸಲು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರು ಆಯ್ಕೆಯಾಗುವಂತೆ ಸಂಘಟನಾತ್ಮಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾಂಗ್ರೆಸ್ 70 ವರ್ಷಗಳ ಆಳ್ವಿಕೆಯಲ್ಲಿ ದಲಿತರನ್ನು ವೋಟ್‌ಬ್ಯಾಂಕ್ ಮಾಡಿಕೊಂಡಿದ್ದೇ ಸಾಧನೆಯಾಗಿದೆ. ಅವರು ದಲಿತರ ಏಳಿಗೆಗೆ ಯಾವುದೇ ಕಾರ್ಯಕ್ರಮ ನೀಡಲಿಲ್ಲ, ಸಮ ಸಮಾಜ ನಿರ್ಮಾಣ ಬಿಜೆಪಿಯಿಂದ ಮಾತ್ರ ಸಾಧ್ಯ. ದೇಶವನ್ನು ಬಲಿಷ್ಠಗೊಳಿಸಲು ಭಾರತೀಯರೆಲ್ಲರೂ ಜಾತಿ, ಭೇದ ಬಿಟ್ಟು ಒಂದಾಗುವ ಕಾಲ ಈಗ ಕಂಡುಬರುತ್ತಿದೆ ಎಂದರು.

ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷರಾದ ನಂಜುಂಡಸ್ವಾಮಿ, ಶ್ರೀದೇವಿ, ಮಲ್ಲನಾಯಕನಹಳ್ಳಿ ಗ್ರಾಪಂ ಅಧ್ಯಕ್ಷ ಬೆಳಗಾನಹಳ್ಳಿ ಬಿ.ಎಸ್.ರಮೇಶ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ನಂಗಲಿ ವಿಶ್ವನಾಥರೆಡ್ಡಿ, ಜಿಲ್ಲಾ ಖಜಾಂಚಿ ಅಮರ್, ನಗರ ಘಟಕದ ಅಧ್ಯಕ್ಷ ಕಲ್ಲುಪಲ್ಲಿ ಕೆ.ಜೆ.ಮೋಹನ್, ಮುಖಂಡ ಮೋತಕಪಲ್ಲಿ ರಾಮಪ್ಪ, ಒಬಿಸಿ ಜಿಲ್ಲಾ ಘಟಕ ಅಧ್ಯಕ್ಷ ಕೆ.ಎಚ್.ನಾಗರಾಜ್ ಮತ್ತಿತರರಿದ್ದರು.