ಬಾಗಲಕೋಟೆ: ವಕ್ ವಿರುದ್ಧ ರಾಜ್ಯಾದ್ಯಂತ ಬಿಜೆಪಿ ಹಮ್ಮಿಕೊಂಡಿದ್ದ ನಮ್ಮ ಭೂಮಿ ನಮ್ಮ ಹಕ್ಕು ಪ್ರತಿಭಟನೆಗಾಗಿ ಬಾಗಲಕೋಟೆ ಜಿಲ್ಲಾ ಬಿಜೆಪಿ ಕಚೇರಿಯಿಂದ ಜಿಲ್ಲಾಡಳಿತ ಭವನದ ವರೆಗೂ ಪ್ರತಿಭಟನಾ ಮೆರವಣಿಗೆ ಆರಂಭಕ್ಕೂ ಮುನ್ನ ಪಕ್ಷದ ಕಾರ್ಯಾಲಯದಲ್ಲಿ ಎರಡು ಬಣಗಳ ಜಗಳ ಬಹಿರಂಗವಾಗಿ ವಾದ ಪ್ರತಿವಾದಗಳು ನಡೆದವು.
ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಹಾಗೂ ಮಾಜಿ ಶಾಸಕ ವೀರಣ್ಣ ಚರಂತಿಮಠ ಬೆಂಬಲಿಗರ ನಡುವೆ ವಾಕ್ಸಮರವೂ ನಡೆಯಿತು. ಇದಕ್ಕೆ ಇಬ್ಬರು ನಾಯಕರು ಸಹ ಸಾಕ್ಷಿ ಆಗಿದ್ದರು.
ಶುಕ್ರವಾರ ವಕ್ ವಿರುದ್ಧದ ಪ್ರತಿಭಟನೆ ಮೆರವಣಿಗಾಗಿ ಎಲ್ಲರೂ ಪಕ್ಷದ ಕಾರ್ಯಾಲಯದಲ್ಲಿ ಸೇರಿದ್ದಾಗ ಪಿ.ಎಚ್.ಪೂಜಾರ ಅವರೊಂದಿಗೆ ಅಲ್ಲಿ ಉಚ್ಛಾಟಿತ ನಾಲ್ವರು ಬೆಂಬಲಿಗರು ಇದ್ದರು. ಅದೇ ವೇಳೆ ಅಲ್ಲಿಗೆ ಬಂದ ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರನ್ನು ಕಂಡು ಗರಂ ಆದರು. ಪಕ್ಷದಿಂದ ಉಚ್ಛಾತರಾದ ಮೇಲೆ ಇಲ್ಲೇಕೆ ಬಂದಿದ್ದೀರಿ ಎಂದು ಪ್ರಶ್ನಿಸಿದರು. ಅದಕ್ಕೆ ಅವರು ಸಹ ನಾವು ಉಚ್ಛಾಟನೆಗೊಂಡಿಲ್ಲ ನಾವು ಭಾಗವಹಿಸುವವರೆ ಎಂದು ವಾದಿಸಿದರು. ಇದರಿಂದ ಅಲ್ಲಿ ವಾದ ವಿವಾದ ನಡೆಯಿತು. ಬಳಿಕ ಪ್ರತ್ಯೇಕ ಕೊಠಡಿಯಲ್ಲಿ ಈ ಬಗ್ಗೆ ಚರ್ಚಿಸೋಣ ಎಂದು ಹಿರಿಯ ಮುಖಂಡರು ತೆರಳಿದರು.
ಪಕ್ಷದ ಜಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಸಂಸದ ಪಿ.ಸಿ.ಗದ್ದಿಗೌಡರ, ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಶಾಸಕ ಸಿದ್ದು ಸವದಿ, ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ, ಮುಖಂಡರಾದ ಬಸವರಾಜ್ ಯಂಕಂಚಿ, ರಾಜು ನಾಯ್ಕರ್ ಅವರು ಪರಿಷತ್ ಸದಸ್ಯ ಪಿ.ಎಚ್.ಪೂಜಾರ, ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರಿಂದ ಪ್ರತ್ಯೇಕವಾಗಿ ಅಭಿಪ್ರಾಯ ಪಡೆದುಕೊಂಡರು.
ಈ ವೇಳೆ ವೀರಣ್ಣ ಚರಂತಿಮಠ ಅವರು, ಕಳೆದ ಚುನಾವಣೆಯಲ್ಲಿ ಬಹಿರಂಗವಾಗಿಯೇ ಬಿಜೆಪಿ ವಿರುದ್ಧ ಕೆಲಸ ಮಾಡಿದ್ದಾರೆ. ಅದರಿಂದ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ. ಈಗ ಅವರು ಮತ್ತೆ ಪಕ್ಷಕ್ಕೆ ಬರುತ್ತಾರೆ ಎಂದರೆ ಪಕ್ಷದ ತತ್ವ ಸಿದ್ದಾಂತಕ್ಕೆ ಒಪ್ಪಿ, ಹಿಂದೆ ಪಕ್ಷ ವಿರೋಽ ಚಟುವಟಿಕೆಯನ್ನು ಮಾಡಲ್ಲ ಎಂದು ಜಿಲ್ಲಾ ಸಮಿತಿಗೆ ಪತ್ರ ಕೊಡಲಿ. ಬಳಿಕ ಕೋರ್ ಕಮೀಟಿನಲ್ಲಿ ಅಭಿಪ್ರಾಯ ಪಡೆದು ಎಲ್ಲರೂ ಒಪ್ಪಿದರೆ ಮರಳಿ ಪಕ್ಷಕ್ಕೆ ಕರೆದುಕೊಳ್ಳಲಿ. ಇವತ್ತು ಪ್ರತಿಭಟನಾ ಮೆರವಣಿಗೆ ಹಾಗೂ ಬಹಿರಂಗ ಸಭೆಯಲ್ಲಿ ಅವರು ಉಚ್ಛಾಟಿತರು ಬಂದರೆ ನಾವು ಬರಲ್ಲ ಎಂದು ಸ್ಪಷ್ಟಪಡಿಸಿದರು ಎಂದು ತಿಳಿದು ಬಂದಿದೆ.
ಬಳಿಕ ಪಿ.ಎಚ್.ಪೂಜಾರ ಅವರು, ಅವರು ಪಕ್ಷ ವಿರೋಽ ಚಟುವಟಿಕೆ ಮಾಡಿಲ್ಲ. ಉಚ್ಛಾಟನೆಯೂ ಆಗಿಲ್ಲ. ಅವರನ್ನು ಯಾವ ಆಧಾರದ ಮೇಲೆ ಉಚ್ಛಾಟನೆ ಮಾಡಿದ್ದಾರೆ? ಯಾರು ಮಾಡಿದ್ದಾರೆ? ನಮ್ಮ ಜೊತೆ ಅವರು ಪಕ್ಷವನ್ನು ಕಟ್ಟಿದ್ದಾರೆ. ಅವರು ಪಕ್ಷದಿಂದ ಹಮ್ಮಿಕೊಂಡಿರುವ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು ಎಂದು ಹೇಳಲಾಗುತ್ತಿದೆ.
ಈಗ ಉಚ್ಛಾಟಿತರನ್ನು ಬಿಟ್ಟು ತಾವು ಪ್ರತಿಭಟನೆಯಲ್ಲಿ ಬನ್ನಿ. ಆ ಬಳಿಕ ಚರ್ಚೆ ಮಾಡಿ ಒಂದು ಇತ್ಯರ್ಥಕ್ಕೆ ಬರೋಣ ಎಂದು ಸಲಹೆ ನೀಡಿದರಂತೆ. ಅವರು ಬಂದರೆ ಮಾತ್ರ ನಾನು ಬರುವೆ, ಈ ಬಗ್ಗೆ ಮತ್ತೆ ಮತ್ತೆ ಮರುಕಳಿಸುವುದು ಬೇಡ, ಸಮಸ್ಯೆ ಬಗೆಹರಿಸಿ ಎಂದು ತಿಳಿಸಿದ ಪೂಜಾರ, ಬಳಿಕ ಪಕ್ಷದ ಪ್ರತಿಭಟನಾ ಮೆರವಣಿಗೆಗೆ ತೆರಳದೆ ಪಕ್ಷದ ಕಾರ್ಯಾಲಯದಲ್ಲಿ ಉಳಿದು ತಮ್ಮ ಬೆಂಬಲಿಗರ ಜೊತೆ ಸಭೆ ನಡೆಸಿದರು ಎಂದು ಪಕ್ಷದ ಮೂಲಗಳು ತಿಳಿಸಿವೆ.