ರಾಯಚೂರಿನ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ ಟಿಕೆಟ್ ಆಕಾಂಕ್ಷಿಗಳ ಸಭೆಯಲ್ಲಿ ಮಾಜಿ ಸಚಿವ ಬಿ.ಶ್ರೀರಾಮುಲುಗೆ ಗುಲ್ಬರ್ಗ ವಿವಿ ಸಿಂಡಿಕೇಟ್ ಸದಸ್ಯ ಡಾ.ಶರಣಬಸವ ಪಾಟೀಲ್ ಟಿಕೆಟ್ ನೀಡುವಂತೆ ಶನಿವಾರ ಮನವಿ ಸಲ್ಲಿಸಿದರು. ಪಕ್ಷದ ಜಿಲ್ಲಾಧ್ಯಕ್ಷ ರಮಾನಂದ ಯದವ, ಮುಖಂಡ ಜಂಬಣ್ಣ ನೀಲಗಲ್ ಇದ್ದರು. 
ಜಿಲ್ಲೆ

ಬಿಜೆಪಿ ಕಚೇರಿಯಲ್ಲಿ ಎಂಎಲ್ಸಿ ಆಕಾಂಕ್ಷಿಗಳ ಸಭೆ

ರಾಯಚೂರು: ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಮಾಜಿ ಸಚಿವ ಬಿ.ಶ್ರೀರಾಮುಲು ಅಧ್ಯಕ್ಷತೆಯಲ್ಲಿ ಈಶಾನ್ಯ ಪದವೀಧರ ಕ್ಷೇತ್ರ ಚುನಾವಣೆ ಪೂರ್ವ ಸಿದ್ಧತೆ ಮತ್ತು ಆಕಾಂಕ್ಷಿಗಳ ಸಭೆ ಶನಿವಾರ ಜರುಗಿತು.
ಮುಂಬರುವ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಗೆ ಪಕ್ಷದ ಮುಖಂಡರು, ಕಾರ್ಯಕರ್ತರು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಎಲ್ಲರೂ ಒಗ್ಗೂಡಿ ಪಕ್ಷದ ಅಭ್ಯರ್ಥಿಯ ಗೆಲುವಿಗಾಗಿ ಕೆಲಸ ಮಾಡಬೇಕು ಎಂದು ಬಿ.ಶ್ರೀರಾಮುಲು ತಿಳಿಸಿದರು.
ಈ ಸಂದರ್ಭದಲ್ಲಿ ಚುನಾವಣೆಯಲ್ಲಿ ಪಕ್ಷದಿಂದ ಸ್ಪರ್ಧೆಗೆ ಅವಕಾಶ ನೀಡುವಂತೆ ಪಕ್ಷದ ಜಿಲ್ಲಾ ಶಿಕ್ಷಕರ ಪ್ರಕೋಷ್ಠದ ಸಂಚಾಲಕ ಹಾಗೂ ಗುಲ್ಬರ್ಗ ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಶರಣಬಸವ ಪಾಟೀಲ್ ಜೋಳದಹೆಡಗಿ, ಬಂಡೇಶ ವಲ್ಕಂದಿನ್ನಿ, ಡಿ.ಶಂಕರರೆಡ್ಡಿ ಮನವಿ ಸಲ್ಲಿಸಿದರು.
ಡಾ.ಶರಣಬಸವ ಪಾಟೀಲ್ ವಲ್ಕಂದಿನ್ನಿ ಮಾತನಾಡಿ, ಕಳೆದ 15 ವರ್ಷಗಳಿಂದ ಪಕ್ಷಕ್ಕಾಗಿ ದುಡಿಯುತ್ತಾ ಬಂದಿದ್ದು, ಪಕ್ಷ ನೀಡಿದ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ. ನೂತನ ಶಿಕ್ಷಣ ನೀತಿ ಜಾರಿ ಕುರಿತಾಗಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾ ಬಂದಿದ್ದು, ಚುನಾವಣೆಯಲ್ಲಿ ಟಿಕೆಟ್ ನೀಡುವಂತೆ ಮನವಿ ಮಾಡಿದರು.
ಸಭೆಯಲ್ಲಿ ಮಾಜಿ ಎಂಎಲ್ಸಿ ಎನ್.ಶಂಕ್ರಪ್ಪ, ಮಾಜಿ ಶಾಸಕರಾದ ಬಸನಗೌಡ ಬ್ಯಾಗವಾಟ್, ಪ್ರತಾಪಗೌಡ ಪಾಟೀಲ್, ಗಂಗಾಧರ ನಾಯಕ, ಪಕ್ಷದ ಜಿಲ್ಲಾಧ್ಯಕ್ಷ ರಮಾನಂದ ಯಾದವ, ಪದಾಕಾರಿಗಳಾದ ಶಿವಬಸಪ್ಪ ಮಾಲಿಪಾಟೀಲ್, ಜಂಬಣ್ಣ ನೀಲಗಲ್, ಶಂಕರರೆಡ್ಡಿ, ಶರಣಪ್ಪಗೌಡ ನಕ್ಕುಂದಿ ಉಪಸ್ಥಿತರಿದ್ದರು.