ಬಾಗಲಕೋಟೆ: ಹತ್ತು ವರ್ಷಗಳ ಹಿಂದೆ ಅಧಿಕಾರಕ್ಕೆ ಬಂದರೆ ಸ್ವಾಮಿನಾಥನ್ ವರದಿ ಜಾರಿ ಮಾಡಲಾಗುವುದು. ರೈತರ ಸಾಲ ಮನ್ನಾ ಮಾಡಲಾಗುವುದು ಎಂದು ಹೇಳಿದ್ದ ಬಿಜೆಪಿ ಮಾತಿಗೆ ತಪ್ಪಿದೆ. ರೈತ ವಿರೋಧಿ ನೀತಿ ಅನುಸರಿಸುತ್ತಿರುವ ಬಿಜೆಪಿ, ಎನ್‌ಡಿಎ ಮೈತ್ರಿಕೂಟವನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂದು ಜಾಗೃತಿ ಅಭಿಯಾನ ಮಾಡಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುಂಡೂರಾವ್ ಸರ್ಕಾರದಲ್ಲಿ ಕರ ವಸೂಲಿಗಾಗಿ ರೈತರ ಮೇಲೆ ಗೋಲಿಬಾರ್ ಮಾಡಲಾಗಿತ್ತು. ಗುಂಡಿಟ್ಟು ಕೊಂದ ಗುಂಡೂರಾವ್ ಸೋಲಿಸಿ ಎಂಬ ಚಳವಳಿ ನಡೆಸಲಾಗಿತ್ತು. ಪರಿಣಾಮ ಸರ್ಕಾರಕ್ಕೆ ಸೋಲಾಗಿತ್ತು. ಈಗಲೂ ಅಂತಹೇ ಚಳವಳಿ ಮಾಡಲಾಗುತ್ತಿದೆ ಎಂದರು.
ಸ್ವಾಮಿನಾಥನ್ ವರದಿ ಜಾರಿಗೊಳಿಸಲಾಗುವುದು ಎಂದಿದ್ದ ಬಿಜೆಪಿ ಸರ್ಕಾರ, ಅಧಿಕಾರಕ್ಕೆ ಬಂದ ಮೇಲೆ ಸುಪ್ರೀಂ ಕೋರ್ಟ್‌ನಲ್ಲಿ ಜಾರಿ ಮಾಡಲಾಗುವುದಿಲ್ಲ ಎಂದು ಹೇಳಿದೆ. ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದ ಸರ್ಕಾರವು ಉದ್ಯಮಿಗಳ ಸಾಲ ಮನ್ನಾ ಮಾಡಿದೆ. ಇವರಿಗೆ ಮತ ಹಾಕಬೇಕಾ? ಎಂದು ಪ್ರಶ್ನಿಸಿದರು.
ಮಹಿಳೆಯರು, ರೈತರು, ದುಡಿಯುವ ವರ್ಗದವರು ಆತಂಕದ ಸ್ಥಿತಿಯಲ್ಲಿದ್ದಾರೆ. ರಾಜ್ಯದ ಬರಗಾಲ ವರದಿ ಇದ್ದರೂ ಸುಪ್ರೀಂ ಕೋರ್ಟ್ ಹೇಳುವವರೆಗೂ ಬರ ಪರಿಹಾರ ನೀಡಲಿಲ್ಲ. ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ದೂರಿದರು.
2022ರ ಹೊತ್ತಿಗೆ ರೈತರ ಆದಾಯ ದ್ವಿಗುಣ ಮಾಡಲಾಗುವುದು ಎಂದು ಹೇಳಲಾಗಿತ್ತು. ಆದಾಯ ದ್ವಿಗಣವಾಗಲಿಲ್ಲ. ಆದರೆ, ಡಿಎಪಿ ರಸಗೊಬ್ಬರ ಬೆಲೆ, ಕೀಟನಾಶಕ, ಟ್ರ್ಯಾಕ್ಟರ್ ಬೆಲೆ ಹೆಚ್ಚಾಗಿದೆ. ದೇಶದಲ್ಲಿ ಮೋದಿಯ ಗಾಳಿ ಇಲ್ಲ. ಬಿಜೆಪಿಗೆ ಈ ಬಾರಿ ರೈತರು ಪಾಠ ಕಲಿಸಲಿದ್ದಾರೆ ಎಂದರು.
ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಕಷ್ಟಪಟ್ಟು, ಅರೆಹೊಟ್ಟೆಯಲ್ಲಿದ್ದುಕೊಂಡು ಕೆಲಸ ಮಾಡುವವರಿಗೆ ದ್ರೋಹ ಮಾಡಲಾಗುತ್ತಿದೆ. ಕಾರ್ಪೊರೇಟ್ ತೆರಿಗೆಯನ್ನು ಶೇ30 ರಿಂದ 20ಕ್ಕೆ ಇಳಿಸಿದ್ದಾರೆ. ಆದರೆ, ರೈತರಿಗೆ ಯಾವುದೇ ಅನುಕೂಲ ಮಾಡಲಿಲ್ಲ ಎಂದು ಟೀಕಿಸಿದರು.
ರೈತರ ಆತ್ಮಹತ್ಯೆ ನಿರಂತರವಾಗಿ ನಡೆಯುತ್ತಲೇ ಇದೆ. ಯಾಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಅಧ್ಯಯನಕ್ಕೆ ಸಮಿತಿ ರಚಿಸಿಲ್ಲ. ಅವರ ಸಂಕಷ್ಟ ಕೇಳಲು ರೈತರ ಮನೆಗೆ ಯಾವುದೇ ಪ್ರತಿನಿಧಿ ಹೋಗಿಲ್ಲ ಎಂದು ದೂರಿದರು.
ರಾಜ್ಯದಲ್ಲಿ 60 ಲಕ್ಷ ಪಂಪ್ ಸೆಟ್‌ಗಳಿವೆ. ಇವುಗಳಿಗೆ ನೀಡುತ್ತಿರುವ ಉಚಿತ ವಿದ್ಯುತ್ ಹಿಂತೆಗೆದುಕೊಳ್ಳಲು ಹುನ್ನಾರ ನಡೆಸಿದ್ದಾರೆ. ರೈತ ವಿರೋಧಿ ನೀತಿಯನ್ನು ಕೇಂದ್ರ ಅನುಸರಿಸುತ್ತಿದೆ. 540 ಸಂಘಟನೆ ಒಳಗೊಂಡಿದ್ದು, ಎಲ್ಲರೂ ಸೇರಿ ಕೇಂದ್ರ ಸರ್ಕಾರದ ವಿರುದ್ಧ ಅಭಿಯಾನ ಮಾಡುತ್ತಿದ್ದೇವೆ ಎಂದರು.
ಶ್ರೀಶೈಲ ನಾಯಕ, ಮುತ್ತಪ್ಪ ಕೋಮಾರ, ರವಿಕಿರಣ ಕೊಂಡಜ್ಜಿ, ಬಸವರಾಜ ಗೋನಾಳ ಇದ್ದರು.