ಜಿಲ್ಲೆ

ಬಿಜೆಪಿ ಆರೋಪದಲ್ಲಿ ಹುರುಳಿಲ್ಲ


ಚಿತ್ರದುರ್ಗ: ವಿಧಾನ ಪರಿಷತ್ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಅತ್ಯಂತ ಹೆಚ್ಚಿನ ಮತಗಳೊಂದಿಗೆ ಕಾಂಗ್ರೆಸ್ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್ ಅವರನ್ನು ಗೆಲ್ಲಿಸುವಂತೆ ಶಾಸಕ ಟಿ.ರಘುಮೂರ್ತಿ ಶಿಕ್ಷಕರಿಗೆ ಮನವಿ ಮಾಡಿದರು.
ನಗರದ ದುರ್ಗದ ಸಿರಿ ಹೋಟೆಲ್ನಲ್ಲಿ ತುರುವನೂರು ಹೋಬಳಿ ಪ್ರೌಢಶಾಲಾ ಶಿಕ್ಷಕರ ಸಭೆಯಲ್ಲಿ ಮಾತನಾಡಿ, ಪರಿಷತ್‌ನಲ್ಲಿ ಪಕ್ಷದ ಬಲ ಹೆಚ್ಚಾದರೆ ಶಿಕ್ಷಕರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಲು ನೆರವಾಗುತ್ತದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದು, ಶಿಕ್ಷಕರ ಪರವಾದ ತೀರ್ಮಾನಗಳಿಗೆ ಬದ್ಧವಾಗಿದೆ. ವಿಧಾನಸಭೆ ಜತೆ ವಿಧಾನ ಪರಿಷತ್‌ನಲ್ಲೂ ಬಹುಮತದ ಅಗತ್ಯವಿದೆ ಎಂದರು.
ಶ್ರೀನಿವಾಸ್ ಕ್ರಿಯಾಶೀಲ ವ್ಯಕ್ತಿಯಾಗಿದ್ದು, ಶಿಕ್ಷಕರ ಧ್ವನಿಯಾಗಿ ಕೆಲಸ ಮಾಡುತ್ತಾರೆ. ಅವರಿಗೆ ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಅನುಭವವಿದೆ ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಉತ್ತಮ ಆಡಳಿತ ಕೊಡುವ ಮೂಲಕ ಜನರಿಗೆ ಕೊಟ್ಟ ಮಾತಿನಂತೆ ಯಶಸ್ವಿಯಾಗಿ ಒಂದು ವರ್ಷ ಪೂರೈಸಿದ್ದಾರೆ. ಬಿಜೆಪಿ ನಿರಾಸೆಯಿಂದ ಸರ್ಕಾರದ ಮೇಲೆ ಹುರುಳಿಲ್ಲದ ಆರೋಪ ಮಾಡಿಕೊಂಡು ಕಾಲ ಕಳೆಯುತ್ತಿದೆ ಎಂದು ದೂರಿದರು.
ಜಿಪಂ ಮಾಜಿ ಅಧ್ಯಕ್ಷ ಟಿ.ರವಿಕುಮಾರ್, ಮಾಜಿ ಸದಸ್ಯರಾದ ಬಾಬುರೆಡ್ಡಿ, ಬಿ.ಪಿ.ಪ್ರಕಾಶ್‌ಮೂರ್ತಿ ಮತ್ತಿತರರು ಇದ್ದರು.