ಜಿಲ್ಲೆ

ಬಿಜೆಪಿ ಆಣತಿಯಂತೆ ಇಡಿ ಕಿರುಕುಳ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ದ್ಯಾವರಹಳ್ಳಿ ಶಾಂತಕುಮಾರ್ ಆರೋಪ, ಡಿಸಿ ಕಚೇರಿ ಎದುರು ಕಾಂಗ್ರೆಸ್ ಪ್ರತಿಭಟನೆ

ಬೆಂಗಳೂರು ಗ್ರಾಮಾಂತರ: ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ವಿರುದ್ಧ ಆಧಾರರಹಿತ ಆರೋಪದಡಿ ಇಡಿ ಅಧಿಕಾರಿಗಳು ಬಿಜೆಪಿ ಸರ್ಕಾರದ ಆಣತಿಯಂತೆ ಕಿರುಕುಳ ನೀಡುತ್ತಿರುವುದು ಖಂಡನೀಯ ಎಂದು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ದ್ಯಾವರಹಳ್ಳಿ ಶಾಂತಕುಮಾರ್ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶುಕ್ರವಾರ ಕಾಂಗ್ರೆಸ್‌ನಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು. ಈ ಕೃತ್ಯ ಖಂಡಿಸಿ ಎಲ್ಲ ಡಿಸಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಂಡಿದ್ದು, ಡಿಸಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸುತ್ತಿದ್ದೇವೆ ಎಂದರು.

ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ದ್ವೇಷದ ರಾಜಕಾರಣಕ್ಕೆ ಇಳಿದಿದೆ. ಕಾಂಗ್ರೆಸ್ ನಾಯಕರ ಆತ್ಮಸ್ಥೈರ್ಯ ಕುಗ್ಗಿಸಲು ಇಲ್ಲಸಲ್ಲದ ಆರೋಪ ಹೊರಿಸಿ ಕಿರುಕುಳ ನೀಡಲಾಗುತ್ತಿದೆ. ಈ ದ್ವೇಷ ರಾಜಕಾರಣಕ್ಕೆ ಮುಂದಿನ ದಿನಗಳಲ್ಲಿ ಜನರೇ ತಕ್ಕ ಉತ್ತರ ನೀಡಲಿದ್ದಾರೆ ಎಂದರು.

ದೇಶವೇ ಹೊತ್ತಿ ಉರಿಯುತ್ತಿದೆ: ಪ್ರಧಾನಿಗಳು, ಸೇನೆ ನೇಮಕಾತಿ ವಿವಾದ ಸೃಷ್ಟಿಸಿ ದೇಶವೆ ಹೊತ್ತಿ ಉರಿಯುವಂತೆ ಮಾಡಿದ್ದಾರೆ. ದೇಶದಲ್ಲಿ ಸಾಮಾಜಿಕ ಸಾಮರಸ್ಯ, ಅರ್ಥವ್ಯವಸ್ಥೆ ಸೇರಿ ಎಲ್ಲವೂ ಅಯೋಮಯವಾಗಿಸಿದ್ದಾರೆ ಎಂದು ಮಾಜಿ ಶಾಸಕ ಮುನಿನರಸಿಂಹಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಹಳೇ ಪ್ರಕರಣಕ್ಕೆ ಜೀವ: ಬಿಜೆಪಿ ಮುಖಂಡರು ಸಾವಿರಾರು ಕೋಟಿ ಆಸ್ತಿ ಮಾಡಿದ್ದಾರೆ, ಇದಕ್ಕೆ ಯಾವುದೇ ಇಡಿ ತನಿಖೆ ಇಲ್ಲ, ನಮ್ಮ ನಾಯಕರ ಮೇಲೆ ಹಳೇ ಪ್ರಕರಣಕ್ಕೆ ಜೀವ ತುಂಬುವ ಮೂಲಕ ದ್ವೇಷ ರಾಜಕಾರಣ ಮಾಡಲಾಗುತ್ತಿದೆ ಎಂದು ಶಾಸಕ ವೆಂಕಟರಮಣಯ್ಯ ದೂರಿದರು.

70 ವರ್ಷ ಆಳಿದ ಕಾಂಗ್ರೆಸ್ 73 ಲಕ್ಷ ಕೋಟಿ ರೂ.ಸಾಲ ಮಾಡಿತ್ತು ಇಂದು ಬಿಜೆಪಿ ಅವರು ಅಭಿವೃದ್ಧಿಯನ್ನೇ ಮಾಡದೆ 153 ಲಕ್ಷ ಕೋಟಿ ರೂ.ಸಾಲ ಮಾಡಿದ್ದಾರೆ ಇದನ್ನು ಪ್ರಶ್ನಿಸುವ ಪ್ರತಿ ಪಕ್ಷಗಳಿಗೆ ಕಿರುಕುಳ ಕೊಡುವ ಕೆಲಸ ಮಾಡಲಾಗುತ್ತಿದೆ ಎಂದರು.