ಜಿಲ್ಲೆ

ಬಿಜೆಪಿ ಅವಧಿಯಲ್ಲೂ ಶಿವಮೊಗ್ಗ ಹೊತ್ತಿ ಉರಿದಿತ್ತು

ಚಿತ್ರದುರ್ಗ: ಬಿಜೆಪಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗಲೂ ಶಿವಮೊಗ್ಗ ಹೊತ್ತಿ ಉರಿದಿತ್ತು. ಆ ಸಮಯದಲ್ಲಿ ಆದಂತಹ ಅಹಿತಕರ ಘಟನೆ ನಮ್ಮ ಸರ್ಕಾರ ಬಂದಾಗ ಆಗಿಲ್ಲ ಎಂದು ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ. ಸುಧಾಕರ್ ತಿರುಗೇಟು ನೀಡಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಗಣಪತಿ ಶೋಭಾಯಾತ್ರೆ ಹಾಗೂ ಈದ್ ಮಿಲಾದ್ ಹಬ್ಬಗಳ ಆಚರಣೆ ಸಮಯದಲ್ಲಿ ಕಿಡಿಗೇಡಿಗಳು ದುಷ್ಕೃತ್ಯ ನಡೆಸುತ್ತಾರೆ. ಶಿವಮೊಗ್ಗ ಗಲಭೆ ಖಂಡಿಸುತ್ತೇನೆ. ಈಗಾಗಲೇ ಹತೋಟಿಗೆ ಬಂದಿದ್ದು, ಸಮರ್ಥವಾಗಿ ನಿಭಾಯಿಸಿದ್ದೇವೆ. ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಬಂದ ನಂತರ ಸೌಹಾರ್ದಯುತ ವಾತಾವರಣ ನಿರ್ಮಾಣವಾಗಿದೆ ಎಂದು ಪ್ರತಿಕ್ರಿಯಿಸಿದರು.

ಶಾಸಕ ಶಾಮನೂರು ಶಿವಶಂಕರಪ್ಪ ಅವರ ಹೇಳಿಕೆ ಸತ್ಯಕ್ಕೆ ದೂರ. ಎಲ್ಲ ಸಮಾಜವನ್ನು ಅಪ್ಪಿಕೊಳ್ಳುವ ಏಕೈಕ ಪಕ್ಷವೆಂದರೆ ಅದು ಕಾಂಗ್ರೆಸ್. ಇದಕ್ಕೆ ಅಂಕಿ-ಅಂಶಗಳೂ ಸಾಕ್ಷಿಯಾಗಿವೆ. ನಮ್ಮ ಜಿಲ್ಲೆ, ಕ್ಷೇತ್ರದಲ್ಲೂ ಆ ಕಾರ್ಯವಾಗಿದೆ. ಎಲ್ಲಿ ಸಮರ್ಥರು ದಕ್ಷವಾಗಿ ಇದ್ದಾರೆ. ಅಲ್ಲಿ ಎಲ್ಲ ಜಾತಿಗೆ ನ್ಯಾಯ ಕೊಡಿಸುವ ಕೆಲಸವಾಗಿದೆ ಎಂದರು.

ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ನನ್ನ ಆತ್ಮೀಯ ಸ್ನೇಹಿತ. ಸೋತ ನಂತರ ಏನೇನೋ ಮಾತಾಡುತ್ತಿದ್ದಾರೆ. ಸ್ವಲ್ಪ ಸಮಾಧಾನದಿಂದ ಇರಬೇಕು. ನಾವು 5 ವರ್ಷ ಸುಮ್ಮನೆ ಇದ್ದು, ಬಿಜೆಪಿಗೆ ಅವಕಾಶ ಕೊಟ್ಟಿದ್ದೇವೆ. ಈಗ ಮೊದಲು ಜನರ ವಿಶ್ವಾಸ ಗಳಿಸಿಕೊಳ್ಳಲಿ. ಸರ್ಕಾರ ಯಾವಾಗ ಹೋಗುತ್ತೆ, ಬಿಡುತ್ತೆ ಅನ್ನೋದು ಸಿಎಂ, ಡಿಸಿಎಂಗೆ ಗೊತ್ತಿದೆ. ಪೂರ್ಣಾವಧಿ ಮುಗಿಸುವ ವಿಶ್ವಾಸವಿದೆ ಎಂದು ಸಂಕ್ರಾಂತಿ ಹಬ್ಬಕ್ಕೆ ಸರ್ಕಾರ ಪತನ ಆಗುತ್ತೆ ಎಂಬ ಹೇಳಿಕೆಗೆ ತಿರುಗೇಟು ನೀಡಿದರು.