ಬಸವಕಲ್ಯಾಣ: ಬಿಜೆಪಿ ಅಭ್ಯರ್ಥಿ ಶರಣು ಸಲಗರ್ ಕೈಯಲ್ಲಿ 32.23 ಲಕ್ಷ ರೂ. ನಗದು ಹಣವಿದೆ. ಇವರ ಒಟ್ಟು ಚರಾಸ್ತಿ 1.59 ಕೋಟಿ ರೂ. ಹಾಗೂ ಸ್ಥಿರಾಸ್ತಿ 1.05 ಕೋಟಿ ರೂ.(ಒಟ್ಟು 2.64 ಕೋಟಿ ರೂ.) ಇದೆ. ಸಲಗರ್ ಅವರ ವಿರುದ್ಧ ಕಲಬುರಗಿ ಜಿಲ್ಲೆಯಲ್ಲಿ ಎರಡು ಪೊಲೀಸ್ ಪ್ರಕರಣ ದಾಖಲಾಗಿವೆ. ಮಂಗಳವಾರ ನಾಮಪತ್ರದ ಜತೆಗೆ ಸಲ್ಲಿಸಿದ ಆಸ್ತಿ ಘೋಷಣಾಪತ್ರದಲ್ಲಿ ಈ ವಿಷಯಗಳು ತಿಳಿಸಿದ್ದಾರೆ.
ಶರಣು ಅವರ ಹತ್ತಿರ 350 ಗ್ರಾಂ ಚಿನ್ನಾಭರಣವಿದ್ದರೆ, ಇವರ ಪತ್ನಿ ಸಾವಿತ್ರಿ ಅವರ ಬಳಿ 60 ಲಕ್ಷ ರೂ. ಮೌಲ್ಯದ 1.3 ಕೆಜಿ ಚಿನ್ನಾಭರಣ ಇವೆ. ಸಾವಿತ್ರಿ ಅವರ ಚರಾಸ್ತಿ 79.79 ಲಕ್ಷ ರೂ. ಹಾಗೂ ಸ್ಥಿರಾಸ್ತಿ 1.85 ಕೋಟಿ ರೂ. ಇದೆ. ಶರಣು ಅವರು ವಿವಿಧ ಬ್ಯಾಂಕ್ ಗಳಿಂದ 47.60 ಲಕ್ಷ ರೂ., ಪತ್ನಿ ಸಾವಿತ್ರಿ 17.47 ಲಕ್ಷ ರೂ. ಸಾಲ ಹೊಂದಿದ್ದಾರೆ. 45 ವರ್ಷದ ಶರಣು ಅವರು ಬಿಎಸ್ಸಿ, ಎಂಇಡಿ ಪದವೀಧರರಿದ್ದಾರೆ.