ದಾವಣಗೆರೆ: ಬಿಜೆಪಿ ಅಧಿಕಾರವಧಿಯಲ್ಲಿ ಜಿಲ್ಲೆಯಲ್ಲಿ ನಡೆದ ಅಕ್ರಮಗಳ ತನಿಖೆ ನಡೆಸಲಾಗುತ್ತಿದೆ ಎಂದು ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಹೇಳಿದರು.
ದಾವಣಗೆರೆಯಲ್ಲಿ ಭಾನುವಾರ ಗೃಹಜ್ಯೋತಿ ಯೋಜನೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಶಾಸಕ ಬಿ.ಪಿ.ಹರೀಶ್ ಮಾತಿಗೆ ಪ್ರತಿಕ್ರಿಯಿಸಿದರು.
ಶೇ. 40 ಕಮಿಷನ್‌ನಿಂದಾಗಿ ಬಿಜೆಪಿ ಸರ್ಕಾರ ಹಾಳಾಯಿತು. ದಾವಣಗೆರೆಯಲ್ಲಿ ಕಾಮಗಾರಿ ಮುಗಿಯದಿದ್ದರೂ ತರಾತುರಿಯಲ್ಲಿ ಕೆಲವು ರಸ್ತೆ, ವೃತ್ತ, ಕಟ್ಟಡಗಳನ್ನು ಉದ್ಘಾಟಿಸಲಾಗಿದೆ. ಒಂದು ಲೋಡ್ ಮಣ್ಣು ತಂದು ಹಾಕದವರ ಹೆಸರನ್ನು ಕೆಲವು ಕಟ್ಟಡಗಳಿಗೆ ನಾಮಕರಣ ಮಾಡಲಾಗಿದೆ ಎಂದು ಕಿಡಿ ಕಾರಿದರು.
ನಗರದಲ್ಲಿ 550 ಕೋಟಿ ರೂ. ಮೊತ್ತದ ಯು.ಜಿ ಕೇಬಲ್ ಅಳವಡಿಕೆ ಯೋಜನೆಗೆ ನನ್ನ ಕಾಲದಲ್ಲಿ ಮಂಜೂರಾತಿ ಕೊಡಿಸಲಾಗಿತ್ತು. ಇದು ಕಾಂಗ್ರೆಸ್ ಕಾಮಗಾರಿ ಎಂಬ ಕಾರಣಕ್ಕೆ ಮುಂದುವರಿಸಲಿಲ್ಲ. ಈಗ ಅದನ್ನು ಕಾರ್ಯಗತ ಮಾಡಲಾಗುತ್ತಿದೆ ಎಂದರು.
ಕೋವಿಡ್ ಕಾಲದಲ್ಲಿ ಬಿಜೆಪಿ ಪ್ರತಿನಿಧಿಗಳು ಸರಿಯಾಗಿ ಕೆಲಸ ಮಾಡಿದ್ದರೆ ಇನ್ನಷ್ಟು ಜೀವಗಳು ಉಳಿಯುತ್ತಿದ್ದವು. ಕ್ವಾರಂಟೈನ್ ಅವಧಿಯಲ್ಲಿ ನೀಡಿದ ಊಟ-ಉಪಾಹಾರ ಸಂಬಂಧ ಹೋಟೆಲ್‌ನವರಿಗೆ ಹಣ ಪಾವತಿ ಮಾಡಿಲ್ಲ. ರೆಮ್‌ಡಿಸಿವರ್ ಮಾತ್ರೆಯನ್ನು ಹೆಚ್ಚುವರಿ ಮೊತ್ತಕ್ಕೆ ಮಾರಾಟ ಮಾಡಲಾಯಿತು. ಇದೆಲ್ಲದರ ಬಗ್ಗೆ ಸಮಗ್ರ ತನಿಖೆ ನಡೆಸಲಾಗುತ್ತಿದೆ ಎಂದರು.
ಹರೀಶ್ ಅವರಿಗೆ ನಗರಸಭೆ ಸದಸ್ಯರಾಗಲು ಅವಕಾಶ ನೀಡಲಾಗಿತ್ತು, ಕಾಂಗ್ರೆಸ್ ನಲ್ಲಿದ್ದ ಅವರು ಬಿಜೆಪಿಗೆ ಹೋದರು. ಮತ್ತೆ ಯಾವಾಗ ಕಾಂಗ್ರೆಸ್ ಗೆ ಬರುತ್ತಾರೋ ಗೊತ್ತಿಲ್ಲ ಎಂದು ಕಾಲೆಳೆದರು.
ಕೇಂದ್ರ ಸರ್ಕಾರ ಪಿಎಂ ಫಸಲ್ ಬಿಮಾ ಯೋಜನೆಯಡಿ ಆ.7ರವರೆಗೆ ನೋಂದಣಿ ಅವಧಿ ವಿಸ್ತರಣೆ ಮಾಡಿದ್ದಾಗಿ ಸಂಸದರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಅಡಕೆ ಬೆಳೆಗಾರರಿಗೂ ಈ ಅವಧಿ ವಿಸ್ತರಣೆಯನ್ನೇಕೆ ಮಾಡಲಿಲ್ಲ? ಎಂದು ಪ್ರಶ್ನಿಸಿದರು.
---