ಪಾಂಡವಪುರ: ಪಟ್ಟಣದ ಬಿಜಿಎಸ್ ಶಿಕ್ಷಣ ಸಂಸ್ಥೆಯಲ್ಲಿ ಮಕ್ಕಳ ದಿನಾಚರಣೆಯ ಅಂಗವಾಗಿ ಗುರುವಾರ ಮಕ್ಕಳ ಮಾರುಕಟ್ಟೆ(ಮಕ್ಕಳಸಂತೆ) ಕಾರ್ಯಕ್ರಮ ನಡೆಯಿತು.
ಶಾಲಾ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಸಂಸ್ಥೆಯ ಕಾರ್ಯದರ್ಶಿ ಡಾ.ಜೆ.ಎಂ.ರಾಮಕೃಷ್ಣೇಗೌಡ ಹಾಗೂ ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಸಿ.ಶಿವಪ್ಪ ಚಾಲನೆ ನೀಡಿದರು. ಪ್ರೀಕೆಜಿಯಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಮಕ್ಕಳ ಸಂತೆ ಹಳ್ಳಿ, ಗ್ರಾಮೀಣ ಸಂತೆಯನ್ನೇ ಮೀರಿಸುವಂತೆ ನಡೆಯಿತು. ಬಗೆ ಬಗೆಯ ಹಣ್ಣು, ತರಕಾರಿಗಳು, ಸೊಪ್ಪು, ಹೂ, ಪಾನಿಪುರಿ, ಗೋಲ್‌ಗೊಪ್ಪ, ಬಜ್ಜಿ, ಎಳನೀರು, ಸಾವಯವ ಬೆಲ್ಲ, ಹಪ್ಪಳ, ಮಜ್ಜಿಗೆ ಸೇರಿದಂತೆ ಇತರ ತಿನಿಸುಗಳನ್ನು ಮಾರಾಟ ಮಾಡಿದರು.
ಹಳ್ಳಿ ಸಂತೆಗಳಲ್ಲಿ ರೈತರು, ಗ್ರಾಹಕರು ತರಕಾರಿಗಳನ್ನು ಮಾರಾಟ ಮಾಡುವ ಮಾದರಿಯಲ್ಲಿಯೇ ವಿದ್ಯಾರ್ಥಿಗಳು ಹಣ್ಣು-ತರಕಾರಿ ಮಾರಾಟ ಮಾಡುವ ಮೂಲಕ ಎಲ್ಲರ ಗಮನಸೆಳೆದರು. ಮಕ್ಕಳ ಕೌಶಲ ಕಂಡು ಪಾಲಕರು ತಲೆದೂಗಿದರು. ಬೆಳಗ್ಗೆಯಿಂದ ಸಂಜೆವರೆಗೂ ಸಂತೆ ನಡೆಯಿತು.
ಸಂಸ್ಥೆ ಕಾರ್ಯದರ್ಶಿ ಡಾ.ಜೆ.ಎಂ.ರಾಮಕೃಷ್ಣೇಗೌಡ ಮಾತನಾಡಿ, ಮಕ್ಕಳಿಗೆ ಶಿಕ್ಷಣ ಮಾತ್ರ ನೀಡುವುದಲ್ಲ. ಅದರ ಹೊರತಾಗಿ ಮಕ್ಕಳಲ್ಲಿ ವಿಶೇಷ ಚಟುವಟಿಕೆ, ಅಭ್ಯಾಸಗಳನ್ನು ಮೂಡಿಸುವ ಸಲುವಾಗಿ ಬಿಜಿಎಸ್ ಶಾಲೆಯಲ್ಲಿ ಕಳೆದ ನಾಲ್ಕೈದು ವರ್ಷಗಳಿಂದಲೂ ಮಕ್ಕಳ ಸಂತೆಯನ್ನು ಆಯೋಜಿಸುವ ಮೂಲಕ ಶಿಕ್ಷಣದ ಜತೆಗೆ ವ್ಯವಹಾರಿಕ ಜ್ಞಾನವನ್ನು ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಜೆಡಿಎಸ್ ಅಧ್ಯಕ್ಷ ಎಸ್.ಎ.ಮಲ್ಲೇಶ್ ಮಾತನಾಡಿ, ಬಿಜಿಎಸ್ ಶಿಕ್ಷಣ ಸಂಸ್ಥೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಜತೆಗೆ ಹಳ್ಳಿ ಸೊಗಡು, ಪರಿಸರ, ಜೀವನ, ವಹಿವಾಟುಗಳನ್ನು ಪರಿಚಯಿಸುವ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಉತ್ತಮ ಕಾರ್ಯ ಎಂದರು.
ಗೃಹ ನಿರ್ಮಾಣ ಮಂಡಳಿ ನಿರ್ದೇಶಕ ಬಿ.ಎಸ್.ಜಯರಾಮು ಮಾತನಾಡಿ, ಮಕ್ಕಳು ಓದುವ ಜತೆಗೆ ವ್ಯವಹಾರಿಕ, ವ್ಯಾಪಾರ ಜ್ಞಾನವನ್ನು ಬೆಳೆಸಿಕೊಳ್ಳುವ ಉದ್ದೇಶದಿಂದ ಮಕ್ಕಳ ಸಂತೆ ಕಾರ್ಯಕ್ರಮ ಆಯೋಜಿಸಲಾಗಿದೆ. ಯಾವ ಮಾದರಿಯಲ್ಲಿ ಲಾಭಗಳಿಸಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಬಹುದು ಎಂಬುದನ್ನು ಕಾರ್ಯಕ್ರಮದ ಮೂಲಕ ತೋರಿಸುವ ಕೆಲಸ ಮಾಡಿದ್ದಾರೆ ಎಂದರು.
ಪುರಸಭೆ ಉಪಾಧ್ಯಕ್ಷ ಅಶೋಕ್, ಮುಖಂಡರಾದ ಅಶ್ವತ್ಥ್ ಕುಮಾರೇಗೌಡ, ಎಚ್.ಎನ್.ಮಂಜುನಾಥ್, ನಿವೃತ್ತ ಶಿಕ್ಷಕ ಚಂದ್ರಶೇಖರಯ್ಯ, ಭಾಸ್ಕರ, ಕಿರಣ್, ಪ್ರಾಂಶುಪಾಲ ಮಹದೇವು, ಮುಖ್ಯಶಿಕ್ಷಕ ರಘು, ಶಿಕ್ಷಕ ವೃಂದವರು ಇದ್ದರು.