ಜಿಲ್ಲೆ

ಬಿಕ್ಕೋಡು ಗ್ರಾಪಂ ಎದುರು ಶವವಿಟ್ಟು ಪ್ರತಿಭಟನೆ

ಬಾಲಮುರಳಿಕೃಷ್ಣ

ಬೇಲೂರು: ಮನೆ ಮುಂಭಾಗದಲ್ಲಿನ ಕೊಳಚೆ ತುಂಬಿದ್ದ ಚರಂಡಿಗೆ ಬಿದ್ದು 40 ವರ್ಷದ ಓಂಕಾರ್ ಎಂಬುವವರು ಮೃತರಾಗಲು ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಮೃತರ ಕುಟುಂಬ ಸದಸ್ಯರು ಹಾಗೂ ಗ್ರಾಮಸ್ಥರು ಬಿಕ್ಕೋಡು ಗ್ರಾಮ ಪಂಚಾಯಿತಿ ಎದುರು ಶವವಿಟ್ಟು ಶುಕ್ರವಾರ ಪ್ರತಿಭಟನೆ ನಡೆಸಿದರು.

ತಾಲೂಕಿನ ಬಿಕ್ಕೋಡು ಪಟ್ಟಣದಲ್ಲಿ ವಾಸವಿದ್ದ ಮೃತ ಓಂಕಾರ್ ಎಂಬುವವರ ಮನೆ ಮುಂದಿನ ಚರಂಡಿಯಲ್ಲಿ ಕಸ ಕಡ್ಡಿಗಳಿಂದ ತುಂಬಿತ್ತಲ್ಲದೆ, ಕೊಚ್ಚೆ ನೀರು ತುಂಬಿ ರೋಗ ರುಜಿನಗಳು ಹರಡಲು ಕಾರಣವಾಗಿತ್ತು. ಆದರೆ ಗ್ರಾಮ ಪಂಚಾಯಿತಿ ಪಿಡಿಒ ಮತ್ತು ಅಧಿಕಾರಿಗಳು ಕೆಲ ದಿನಗಳ ಹಿಂದೆ ಬಿಕ್ಕೋಡು ಪಟ್ಟಣದ ಚರಂಡಿಗಳ ಸ್ವಚ್ಛತೆಗೆಂದು 50 ಸಾವಿರ ರೂ. ಹಣ ತೆಗೆದುಕೊಂಡು ಉಳ್ಳವರ ಮನೆ ಮುಂಭಾಗದಲ್ಲಿ ಕೆಲವೆಡೆ ಸ್ವಚ್ಛಗೊಳಿಸಿ, ಸ್ಲ್ಯಾಬ್ ಅಳವಡಿಸಿದ್ದಾರೆ. ಆದರೆ ಬಡವರ ಮನೆ ಮುಂದೆ ಸ್ವಚ್ಛತೆ ಹೋಗಲಿ ಸ್ಲ್ಯಾಬ್ ಸಹ ಅಳವಡಿಸದ ಕಾರಣ ನಡೆದುಕೊಂಡು ಬರುತಿದ್ದ ಸಂದರ್ಭ ಓಂಕಾರ್ ಎಡವಿ ಚರಂಡಿಗೆ ಬಿದ್ದಿದ್ದಾರೆ. ಆದರೆ ಅವರು ಮೇಲೇಳಲು ಇನ್ನಿಲ್ಲದಂತೆ ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ. ಕಾರಣ ಚರಂಡಿಯಲ್ಲಿ ತುಂಬಿದ್ದ ಹೂಳು, ಕೊಳಚೆ ನೀರು ಹಾಗೂ ಕಸ ಕಡ್ಡಿಗಳಿಂದ ಮೇಲೇಳಲು ಸಾಧ್ಯವಾಗದೆ ಓಂಕಾರ್ ಸ್ಥಳದಲ್ಲೆ ಮೃತರಾಗಿದ್ದಾರೆ.

ಇವರ ಸಾವಿಗೆ ನೇರವಾಗಿ ಗ್ರಾಮ ಪಂಚಾಯಿತಿ ಅಧಿಕಾರಿ ಮತ್ತು ಸದಸ್ಯರು ಕಾರಣರಾಗಿದ್ದು, ಸಾವಿಗೆ ಕಾರಣರಾದ ಪಿಡಿಒ ಅವರನ್ನು ಸೇವೆಯಿಂದ ವಜಾ ಮಾಡಬೇಕು ಹಾಗೂ ಇಲ್ಲಿನ ಸದಸ್ಯರು ರಾಜೀನಾಮೆ ನೀಡಬೇಕೆಂದು ಸಾರ್ವಜನಿಕರು ಬಿಕ್ಕೋಡು ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಶವವಿಟ್ಟು ಪ್ರತಿಭಟಿಸಿದ್ದಲ್ಲದೆ, ಈ ಸಾವಿಗೆ ನ್ಯಾಯ ಸಿಗಬೇಕು. ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ದೊರಕಿಸಿ ಕೊಡಬೇಕೆಂದು ಆಗ್ರಹಿಸಿದರು.

ಪ್ರತಿಭಟನೆ ಸಂದರ್ಭ ಮಾತನಾಡಿದ ಬಿಕ್ಕೋಡು ಗ್ರಾಮ ಪಂಚಾಯಿತಿ ಸದಸ್ಯ ಕುಮಾರ್, ಪಂಚಾಯಿತಿ ವ್ಯಾಪ್ತಿಯ ಬಿಕ್ಕೋಡು ಪಟ್ಟಣದಲ್ಲಿರುವ ಚರಂಡಿಗಳ ಸ್ವಚ್ಛತೆಗೆಂದು 50 ಸಾವಿರ ರೂ. ಹಣದಲ್ಲಿ ಅಧಿಕಾರಿಗಳು ಕೆಲ ಚರಂಡಿ ಸ್ವಚ್ಛಗೊಳಿಸಿದ್ದು ಬಿಟ್ಟರೆ ಬೇರೆ ಚರಂಡಿಗಳತ್ತ ಮುಖ ಮಾಡದ ಕಾರಣ ಈ ಘಟನೆಗೆ ಕಾರಣವಾಗಿದೆ. ಇಲ್ಲಿ ಯಾರೇ ತಪ್ಪು ಮಾಡಿದ್ದರೂ ಅವರಿಗೆ ತಕ್ಕ ಶಿಕ್ಷೆಯಾಗಬೇಕು. ಮತ್ತು ಮುಂದಿನ ದಿನಗಳಲ್ಲಿ ಇಂತಹ ಘಟನೆಗಳಿಗೆ ಅವಕಾಶವಾಗದಂತೆ ಅಧಿಕಾರಿಗಳು ಎಚ್ಚರಿಕೆ ಹರಿಸಬೇಕು ಎಂದರು.

ಈ ಸಂದರ್ಭ ಸ್ಥಳಕ್ಕಾಗಮಿಸಿದ ಪೊಲೀಸರು ಇಲ್ಲಿ ಶವವಿಟ್ಟು ಪ್ರತಿಭಟಿಸಲು ಅವಕಾಶವಿಲ್ಲ ಎಂದು ತಿಳಿಸಿದ್ದರಿಂದ ಗ್ರಾಮಸ್ಥರು ಹಾಗೂ ಪೊಲೀಸರ ನಡುವೆ ಕೆಲ ಸಮಯ ಮಾತಿನ ಚಕಮಕಿಗೂ ಕಾರಣವಾಗಿ ನಂತರ ಬಿಕ್ಕೋಡು ಗ್ರಾಪಂ ಅಧ್ಯಕ್ಷ ಹೇಮಚಂದ್ರ ಅವರು ಆಗಮಿಸಿ ಕುಟುಂಬ ಸದಸ್ಯರು ಹಾಗೂ ಗ್ರಾಮಸ್ಥರ ಮನವೊಲಿಸಿ, ಕೆಲ ಭರವಸೆ ನೀಡಿ ಸಮಾಧಾನಪಡಿಸಿದ್ದರಿಂದ ಪ್ರತಿಭಟನೆ ಕೈಬಿಟ್ಟು ಮೃತದೇಹವನ್ನು ಅಂತ್ಯಕ್ರಿಯೆಗೆ ಕೊಂಡೊಯ್ದರು. ಮೃತರಿಗೆ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.