ಬೀದರ್: ಹಳ್ಳಿಖೇಡ್ ಹತ್ತಿರದ ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ (ಬಿಎಸ್ಸೆಸ್ಕೆ)ಗೆ ಈ ಹಿಂದೆ ಮಾತು ಕೊಟ್ಟಂತೆ 100 ಕೋಟಿ ರೂ. ಅನುದಾನ ಒದಗಿಸಿ ಕ್ರಷಿಂಗ್ ಆರಂಭಿಸಬೇಕೆಂದು ರಾಜ್ಯ ರೈತ ಸಂಘ (ಪುಟ್ಟಣ್ಣಯ್ಯ ಬಣ) ಜಿಲ್ಲಾ ಸಮಿತಿ ಆಗ್ರಹಿಸಿದೆ.
ಬುಧವಾರ ಇಲ್ಲಿ ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದ ಸಂಘದ ಪ್ರಮುಖರು, ಚುನುವಣಾ ಪೂರ್ವದಲ್ಲಿ ಜಿಲ್ಲೆಗೆ ಆಗಮಿಸಿದಾಗ ಬಿಜೆಪಿ ಸರ್ಕಾರ ಬಂದರೆ ಬಿಎಸ್ಸೆಸ್ಕೆಗೆ 100 ಕೋಟಿ ರೂ. ಅನುದಾನ ಒದಗಿಸಿ ಕಾರ್ಖಾನೆ ಪುನರಾರಂಭಿಸುವುದಾಗಿ ತಾವು ಹೇಳಿರುವಿರಿ. ಕೊಟ್ಟ ಮಾತಿನಂತೆ ಅನುದಾನ ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ.
ಸಹಕಾರಿ ಬ್ಯಾಂಕ್ಗಳಲ್ಲಿನ ಮಧ್ಯಮಾವಧಿ ಸಾಲಗಳ ಬಡ್ಡಿ ಮನ್ನಾ ಅವಧಿ ಮಾರ್ಚ್ 31 ರವರೆಗೆ ವಿಸ್ತರಿಸಬೇಕು. ಎಸ್ ಬಿಐ ಜಾರಿಗೆ ತಂದ ಸಾಲ ಋಣಮುಕ್ತ ಯೋಜನೆಯನ್ನು ಸಹಕಾರ ಬ್ಯಾಂಕ್ ಗಳಲ್ಲಿ ಸಹ ಜಾರಿಗೊಳಿಸಿ ರೈತರ ಖಟ್ ಬಾಕಿ ಸಾಲದಿಂದ ಋಣಮುಕ್ತ ಗೊಳಿಸಬೇಕು. ಕ್ವಿಂಟಾಲ್ ತೊಗರಿಗೆ ರೂ.8 ಸಾವಿರ ಬೆಲೆ ನಿಗದಿಗೊಳಿಸಿ ಮಾರ್ಚ್ ಅಂತ್ಯದವರೆಗೆ ರೈತರು ಬೆಳೆದ ಎಲ್ಲ ತೊಗರಿ ಖರೀದಿ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಸಂಘದ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ, ಸಂತೋಷ ಬಿಜಿ ಪಾಟೀಲ್, ನಾಗಶೆಟ್ಟೆಪ್ಪಾ ಲಂಜವಾಡೆ, ಶಾಂತಮ್ಮಾ ಮೂಲಗೆ,ನಿರ್ಮಕಾಂತ ಪಾಟೀಲ್, ವಿಠ್ಠಲರಾವ್ ಮೇತ್ರೆ, ಸುಭಾಷ ಇಟಗೆ, ರುದ್ರಯ್ಯಾ ಸ್ವಾಮಿ ಇತರರಿದ್ದರು.